ಡಿಸೆಂಬರ್ 9ರಂದು ಖರ್ಗೆಗೆ ನಾವೇ ಸಿಹಿ ಸುದ್ದಿ ಕೊಡುತ್ತೇವೆ: ಎಸ್.ಎಂ.ಕೃಷ್ಣ

SM Krishna

ಬೆಂಗಳೂರು, ಡಿ.3 ಗೊತ್ತುಗುರಿ ಇಲ್ಲದ ಮೈತ್ರಿ ಸರ್ಕಾರವನ್ನು ಕಿತ್ತು ಹಾಕಿ ಬಿಜೆಪಿ ಸರ್ಕಾರ ತನ್ನಿ ಎಂದು ಕಾಂಗ್ರೆಸ್‌ನ ಶಾಸಕರು ತಮ್ಮನ್ನು ಭೇಟಿಯಾಗಲು ಬಂದಾಗಲೆಲ್ಲಾ ಹೇಳುತ್ತಿದ್ದೆ.  ನನ್ನ ಮಾತಿಗೂ ಕಿಮ್ಮತ್ತು ಕೊಟ್ಟು ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ತಂದಿದ್ದಾರೆ. ಅದಕ್ಕೆ ನನಗೆ ಸಂತೋಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಪುನರುಚ್ಚರಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ಪರವಾಗಿ ಪ್ರಚಾರ ನಡೆಸಿದ ಅವರು, ಈ ಉಪಚುನಾವಣೆ ಬರಲು ಏನು ಕಾರಣ ಎಂಬುದು ಎಲ್ಲರಿಗೂ ಗೊತ್ತು. ಕಳೆದ 14 ತಿಂಗಳ ಕಾಲ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ಅರ್ಧ ಗಂಟೆಯಲ್ಲಿ ತರಾತುರಿಯಲ್ಲಿ ಕಾಂಗ್ರೆಸ್-ಜೆಡಿಎಸ್‌ನವರು ಸರ್ಕಾರ ರಚನೆ ಮಾಡಿದ್ದರು. ಅವರಿಗೆ ಯಾವ ಸ್ಪಷ್ಟನೆಯೂ ಇರಲಿಲ್ಲ. ಇದು ಜನರಿಗೆ ನಿರಾಶೆ ಉಂಟುಮಾಡಿತು. ಸರ್ಕಾರ ರಚಿಸಿದ ಮೇಲೂ ಜನರ ಕಷ್ಟ ಸುಖಗಳಿಗೆ ಅವರು ಸ್ಪಂದಿಸಲಿಲ್ಲ. ಜನರ ಮನಸ್ಸಿನಲ್ಲಿ ಕುದಿಯುತ್ತಿದ್ದ ಭಾವನೆಗಳಿಗೆ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಮುನಿರತ್ನ ಸ್ಪಷ್ಟ ರೂಪ ಕೊಟ್ಟರು‌. ಇದರಿಂದ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುವಂತಾಯಿತು ಎಂದು ವಿವರಿಸಿದರು.

ಪ್ರಸಕ್ತ ಕಾಂಗ್ರೆಸ್ ನಲ್ಲಿ ಯಾವುದೇ ಗೊತ್ತುಗುರಿ ಇಲ್ಲ, ಎಲ್ಲರೂ ಗೊಂದಲದಲ್ಲಿದ್ದಾರೆ.  ಯಾರು ಎ ಟೀಮ್...ಯಾರು ಬಿ ಟೀಮ್ ಎನ್ನುವುದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದೆ ಎನಿಸುತ್ತಿಲ್ಲ.  ಸಿದ್ದರಾಮಯ್ಯ ಒಂದು ದಿಕ್ಕು, ಕುಮಾರಸ್ವಾಮಿ ಇನ್ನೊಂದು ದಿಕ್ಕು, ದೇವೇಗೌಡರು ಮತ್ತೊಂದು ದಿಕ್ಕಿನಲ್ಲಿದ್ದಾರೆ. ಹೀಗಾಗಿ ಅವರೊಳಗೆ ಒಪ್ಪಂದ ನಡೆದಿದೆ ಅನಿಸುತ್ತಿಲ್ಲ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರವನ್ನು ಬೀಳಲು ಅವಕಾಶ ಕೊಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ. 

ದೇವೇಗೌಡರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ.  ನಾವೇನು ಸಾಧನೆ ಮಾಡಬಲ್ಲೆವು ಎಂಬುದನ್ನು ಡಿಸೆಂಬರ್ 9ರಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸುತ್ತೇವೆ ಎಂದು ಸೂಚ್ಯವಾಗಿ ಹೇಳಿದರು.

ಈಗ ಉಪಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ.  ಹಾಗಾಗಿ ಯಡಿಯೂರಪ್ಪ ಸರ್ಕಾರಕ್ಕೆ ಬೇಕಾದ ಬಹುಮತ ಸಿಕ್ಕೇ ಸಿಗುತ್ತದೆ.  ಹಾಗಾಗಿಯೇ ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ದೇವೇಗೌಡರು ಹೇಳುತ್ತಿದ್ದಾರೆ.  ಡಿಸೆಂಬರ್ 9 ರ ನಂತರ ಮಲ್ಲಿಕಾರ್ಜುನ ಖರ್ಗೆಯವರಿಗೆ ಭ್ರಮನಿರಸನವಾಗುತ್ತದೆ.  ನಾವೇ ಅವರಿಗೆ ಸಿಹಿ ಸುದ್ದಿಕೊಡುತ್ತೇವೆ ಎಂದು ಪರೋಕ್ಷವಾಗಿ ಖರ್ಗೆ ಅವರಿಗೆ ಚುಚ್ಚಿದರು.