ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬರಬೇಕು - ಸಂಸದ ಕೆ. ರಾಜಶೇಖರ ಹಿಟ್ನಾಳ

Officers should come to the meeting with comprehensive information - MP K. Rajasekhara Hitna

ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬರಬೇಕು - ಸಂಸದ ಕೆ. ರಾಜಶೇಖರ ಹಿಟ್ನಾಳ 

ಕೊಪ್ಪಳ 20 : ಅಧಿಕಾರಿಗಳು ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಸರಕಾರದ ಯೋಜನೆಗಳ ಕೆಲವೊಂದು ಮಾಹಿತಿ ತಮಗೆ ಗೊತ್ತಿಲ್ಲದಿದ್ದರೆ ಜನರಿಗೆ ಮಾಹಿತಿ ಹೇಗೆ ನೀಡುತ್ತಿರಾ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಹೇಳಿದರು. ಅವರು ಗುರುವಾರ ಕೊಪ್ಪಳ ಜಿಲ್ಲಾ ಪಂಚಾಯತಿ ಜೆ.ಹೆಚ್‌.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) 2024-25ನೇ ಸಾಲಿನ 3ನೇ ತ್ರೈಮಾಸಿಕದ ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರೀಶೀಲನಾ  ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.  ಫಸಲ ಭಿಮಾ ಯೋಜನೆ 2016 ರಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಎಷ್ಟು ರೈತರು ನೊಂದಣಿ ಮಾಡಿಸಿದ್ದಾರೆ ಮತ್ತು ಇನ್ಸೂರೆನ್ಸ್‌ ಕಂಪನಿಯವರು ಇಲ್ಲಿಯವರೆಗೆ ಎಷ್ಟು ರೈತರಿಗೆ ಬೆಳೆ ಪರಿಹಾರ ನೀಡಿದ್ದಾರೆ. ರೈತರಿಗಿಂತ ವಿಮಾ ಕಂಪನಿ ಅವರಿಗೆ ಹೆಚ್ಚಿನ ಲಾಭವಾಗುತ್ತದೆ. ಹಾಗಾದರೆ ರೈತರು ಹೇಗೆ ಇನ್ಸೂರೆನ್ಸ್‌ ಮಾಡುತ್ತಾರೆ. ವೆಹಿಕಲ್ ಇನ್ಸುರೆನ್ಸ್‌ ತರಹ ಅಪಘಾತವಾದ ತಕ್ಷಣ ಹೇಗೆ ಅವರು ಪರಿಹಾರ ನೀಡುತ್ತಾರೆ. ಹಾಗೆ ರೈತರಿಗೆ ಬೆಳೆ ಪರಿಹಾರ ನೀಡುವಂತಾಗಬೇಕು. ಅಂದಾಗ ರೈತರು ಫಸಲ ಭಿಮಾ ಯೋಜನೆ ಮಾಡಿಸಲು ತಾವಾಗಿಯೇ ಮುಂದೆ ಬರುತ್ತಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಹೇಳಿದರು. 2023-24ನೇ ಸಾಲಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮ ಪಿ.ಪಿ.ಐ.ಯು.ಸಿ.ಡಿ ಯ ಪ್ರಗತಿಯಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 20 ವಿವಿಧ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಪ್ರಸ್ತುತ 17 ತಜ್ಞ ವೈದ್ಯರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗು ಮಗು ಕಾರ್ಯಕ್ರಮದಡಿ ಒಟ್ಟು 933 ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಮನೆಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಆರೋಗ್ಯ ನಂದನ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 0-18 ವಯಸ್ಸಿನ 3,84,165 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ. 2023-24ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ 9 ಗ್ರಾಮ ಪಂಚಾಯತಿಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯತಿಗಳನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಂಸದರಿಗೆ ಸಭೆಯಲ್ಲಿ ಮಾಹಿತಿ ನೀಡಿದರು. ಬೇಸಿಗೆ ಆರಂಭವಾಗಿರುವುದರಿಂದ ಜನರಿಗೆ ನೀರಿನ ತೊಂದರೆ ಆಗಬಾರದು. ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಜೀವನ ಮಿಷನ್ (ಜೆ.ಜೆ.ಎಂ) ಕಾಮಗಾರಿಗಳು ಎಷ್ಟಿವೆ ಮತ್ತು ಎಷ್ಟು ಕಾಮಗಾರಿಗಳು ಮುಗಿಸಿ ಜನರಿಗೆ ನೀರು ಕೊಡುತ್ತಿದ್ದಿರಾ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಂಸದರು ಕೇಳಿದರು. ಜೆ.ಜೆ.ಎಂ. ಒಟ್ಟು 772 ಕಾಮಗಾರಿಗಳಲ್ಲಿ 663 ಕಾಮಗಾರಿ ಮುಗಿದಿರುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಹೇಳಿದಾಗ ಬೇಗನೆ ಎಲ್ಲಾ ಕಾಮಗಾರಿಗಳನ್ನು ಮುಗಿಸಿ. ಇಪ್ಪತ್ನಾಲ್ಕು ತಾಸು ನೀರು ಕೊಡಿ. ವಲ್ಡ್‌ ಬ್ಯಾಂಕ್ ನಿಯಮ ಬಹಳ ಇವೆ ಅದಕ್ಕಿಂತ ಮುಂಚೆ ಎಲ್ಲಾ ಕೆಲಸ ಮುಗಿಸಿ ಎಂದು ಹೇಳಿದರು. ಕನಕಗಿರಿಯಲ್ಲಿರುವ ಟೆಕ್ನಾಲಜಿ ಪಾರ್ಕ್‌ ಅಂತಿಮ ಹಂತಕ್ಕೆ ಬಂದಿದೆ. ಪಬ್ಲಿಕ್‌/ ಪ್ರಾವೇಟ್ ಪಾರ್ಟನರ್‌ಶಿಫ್‌ನಲ್ಲಿ ಮಾಡಲು ಖಾಸಗಿಯವರು ಮುಂದೆ ಬಂದಿದ್ದಾರೆ. ಅಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ 20 ಕೋಟಿ ಅನುದಾನ ಬೇಕಾಗುತ್ತದೆ. ನಾವು ಭೂಮಿ ನೀರು ವಿದ್ಯುತ್ ಒದಗಿಸಿದರೆ ಖಾಸಗಿಯವರು ಮುಂದು ಬರುತ್ತಾರೆ. ಇದರಿಂದ ನಮ್ಮ ಭಾಗದ ಜನರಿಗೆ ಅನುಕೂಲಕರವಾಗಲಿದೆ. ಇದು ರಾಜ್ಯದಲ್ಲಿರು ಏಕೈಕ ಟೆಕ್ನಾಲಜಿ ಪಾರ್ಕ ಆಗಲಿದೆ. ನಮ್ಮ ಇಲಾಖೆಯಿಂದ ರೈತರು ಬೆಳೆಯುವ ಹಲವಾರು ತೋಟಗಾರಿಕೆ ಬೆಳೆಗಳಿಗೆ ಸಬ್ಸಿಡಿಗಳನ್ನು ನೀಡಲಾಗುತ್ತದೆ. ಜೇನು ಸಾಕಣೆ ಮಾಡುವವರಿಗೆ ಶೇ. 75 ಪ್ರತಿಶತ ಸಬ್ಸಿಡಿ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೆಶಕ ಕೃಷ್ಣ ಉಕ್ಕುಂದ ಅವರು ಸಂಸದರಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ವತಿಯಿಂದ ಶಾಲಾ-ಕಾಲೇಜುಗಳ ಆವರಣ. ಆಸ್ಪತ್ರೆ. ಅಂಗನವಾಡಿ ಕೇಂದ್ರ ಸೇರಿದಂತೆ ಇತರೆ ಕಡೆಗಳಲ್ಲಿ ತಲಾ 500 ಗಿಡಗಳನ್ನು ಹಚ್ಚಬೇಕು. ಅವುಗಳ ನಿರ್ವಹಣಾ ಕಾರ್ಯವನ್ನು ಮಾಡಬೇಕು. ವಿವಿಧ ಇಲಾಖೆಯವರು ಕೆಲಸಗಳು ಆಗಿವೆ ಎಂದು ಮಾಹಿತಿ ನೀಡುತ್ತಿರಾ ಆದರೆ ಅಲ್ಲಿ ಹೋಗಿ ನೋಡಿದಾಗ ಇನ್ನೂ ಪೂರ್ಣವಾಗಿರುವದಿಲ್ಲ ಹಾಗಾಗಿ ಇನ್ನೂ ಮುಂದೇ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ಆಯಾ ಭಾಗದ ಜನರಿಂದ ಮಾಹಿತಿ ಪಡೆಯಲಾಗುವುದು ಎಂದು ಅಧಿಕಾರಿಗಳಿಗೆ ಹೇಳಿದರು. ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅಂಜನಾದ್ರಿ. ಆನೆಗೊಂದಿ. ಹುಲಗಿ. ಸೇರಿದಂತೆ ಇತರೆ ಪ್ರವಾಸಿ ಸ್ಥಳಗಳಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲು ಜನರು ಹೇಳುತ್ತಿದ್ದಾರೆ. ವಿಶೇಷ ಬಸ್ಸುಗಳ ವ್ಯವಸ್ಥೆ ನಿಯಮವಿದ್ದರೆ ಜನರಿಗೆ ಅನುಕೂಲಮಾಡಿಕೊಡಲು ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ನರೇಗಾದಲ್ಲಿ ಮಾನವ ದಿನಗಳು ಸರಿಯಾಗಿ ಸದುಪಯೋಗವಾಗಬೇಕು. ಇದಕ್ಕಾಗಿಯೇ ಹೆಚ್ಚುವರಿಯಾಗಿ ಅನುದಾನ ನೀಡುತ್ತಾರೆ. ಹಾಗಾಗಿ ಸರಿಯಾಗಿ ಪ್ಲ್ಯಾನ್ ಮಾಡಿ ಜನರಿಗೆ ಕೆಲಸ ಕೊಡಬೇಕು. ಜನರು ಬಹಳಷ್ಟು ನೀರೀಕ್ಷೆ ಇಟ್ಟುಕೊಂಡು ತಮ್ಮ ಹತ್ತಿರ ಬಂದಾಗ ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡಬೇಕು. ಸಭೆ ಸಮಾರಂಭಗಳಿದ್ದಾಗ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕೆಂದು ಸಂಸದರು ಹೇಳಿದರು. ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ಚತುರ್ವೇದಿ ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಸರಸ್ವತಿ ಕೃಷ್ಣಪ್ಪ ಇಟ್ಟಂಗಿ ದೊಡ್ಡಬಸನಗೌಡ ಅಮರೇಗೌಡ ಬಯ್ಯಾಪೂರ ಅಂಬಣ್ಣ ನಾಯಕ ನಂದಿತಾ ಶಿವನಗೌಡ ದಾನರೆಡ್ಡಿ ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ತುಕಾರಾಮಪ್ಪ ಗಡಾದ್ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್ ಜಿ.ಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಟಿ.ಲಿಂಗರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.