ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪಾರದರ್ಶಕ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ
ಹಾವೇರಿ 21: ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 20ವರೆಗೆ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಯಾವುದೇ ಲೋಪವಾಗದಂತೆ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಪರೀಕ್ಷಾ ಗೌಪ್ಯತೆ ಕಾಪಾಡಿಕೊಳ್ಳಬೇಕು ಹಾಗೂ ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಈ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ ವಿವಿಧ ಇಲಾಖೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯಗಳಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಉಪನ್ಯಾಸಕರು ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದ ಹೊರ ವಲಯ ಹಾಗೂ ಕೊಠಡಿಯ ಒಳಗೆ ಶಿಸ್ತುಬದ್ಧವಾಗಿ ಪರೀಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಸಬೇಕು ಎಂದು ನಿರ್ದೇಶನ ನೀಡಿದರು.
ತ್ರಿ ಸದಸ್ಯ ಕಮೀಟಿ: ಪ್ರಶ್ನೆ ಪತ್ರಿಕೆ ಬಂಡಲ್ ತೆಗೆದುಕೊಂಡುಹೋಗಲು ಪ್ರತಿ ತಾಲೂಕಿಗೂ ತಹಶೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಿನ್ಸಿಪಾಲ್ ಒಳಗೊಂಡ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನಕ್ಕೆ ಜಿಪಿಎಸ್ ಕಡ್ಡಾಯಗೊಳಿಸಲಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕಿಗೆ ನಿಗದಿಪಡಿಸಿದ ಸಮಯಕ್ಕೆ ಅನುಗುಣವಾಗಿ ತೆಗೆದುಕೊಂಡು ಹೋಗಬೇಕು ಎಂದು ಸೂಚನೆ ನೀಡಿದರು.
ಸ್ವಚ್ಛತೆಗೆ ಆದ್ಯತೆ: ಪರೀಕ್ಷಾ ಕೊಠಡಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಗಡಿಯಾರ, ಫ್ಯಾನ್, ಬೆಳಕಿನ ವ್ಯವಸ್ಥೆ ಇರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಹೊಂದಿರಬೇಕು.
ಕೊಠಡಿ ಮೇಲ್ವಿಚಾಕರನ್ನು ನೇಮಕಮಾಡುವಾಗ ವಿಜ್ಞಾನ ಉಪನ್ಯಾಸಕರನ್ನು ಕಲಾ-ವಾಣಿಜ್ಯ ವಿಷಯಗಳಿಗೆ ಹಾಗೂ ಕಲಾ - ವಾಣಿಜ್ಯ ವಿಭಾಗದ ಉಪನ್ಯಾಸಕರನ್ನು ವಿಜ್ಞಾನ ವಿಷಯದ ಪರೀಕ್ಷೆಗೆ ನಿಯೋಜಿಸಬೇಕು. ಕೊಠಡಿ ಮೇಲ್ವಿಚಾರಕರ ಮಕ್ಕಳು ಪರೀಕ್ಷೆ ಬರೆಯುತ್ತಿಲ್ಲ ಎಂಬುವದನ್ನು ಖಾತ್ರಿಪಡಿಸಿಕೊಂಡು ನಿಯೋಜಿಸಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಬಂದೋಬಸ್ತ್: ಪರೀಕ್ಷೆ ನಡೆಯುವ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲು ಹಾಗೂ ಆರೋಗ್ಯ ಶುಶ್ರೂಷಕಿಯರನ್ನು ನಿಯೋಜನೆ ಮಾಡಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಸಿ ಟಿವಿ ಕಡ್ಡಾಯ: ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವಾಗ ಮತ್ತು ಉತ್ತರ ಪತ್ರಿಕೆ ಬಂಡಲ್‌ಗಳನ್ನು ಕಡ್ಡಾಯವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿ ಸೀಲ್ ಮಾಡಬೇಕು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆ ಬಂಡಲ್‌ಗಳನ್ನು ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಅಂಚೆ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಇಲೆಕ್ಟ್ರಾನಿಕ್ ಉಪಕರಣಗಳ ನಿಷೇಧ: ಪರೀಕ್ಷಾರ್ಥಿಗಳು ಅಥವಾ ಕೊಠಡಿಯ ಮೇಲ್ವಿಚಾರಕರಾಗಲಿ ಪರೀಕ್ಷಾ ಕೇಂದ್ರದೊಳಗೆ ಅತ್ಯಾಧುನಿಕ ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಪೇಜರ್, ವೈರಲೆಸ್ ಸೆಟ್ ಹಾಗೂ ರಿಸ್ಟ್ ವಾಚ್‌ಗಳನ್ನು ನಿಷೇಧಿಸಿದೆ. ಈ ಕುರಿತಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚಿಸಿದರು.
200 ಮೀಟರ್ ಪ್ರದೇಶ ನಿಷೇಧ: ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಝರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಆನಂದ ಮುದಕಮ್ಮನವರ ಅವರು ಮಾತನಾಡಿ, ಜಿಲ್ಲೆಯಲ್ಲಿ 13,493 ಹೊಸ, 794 ಪುನರಾವರ್ತಿತ, 402 ಖಾಸಗಿ ಹಾಗೂ ಫಲಿತಾಂಶ ಸುಧಾರಣೆ ಬಯಿಸಿ 11 ವಿದ್ಯಾರ್ಥಿಗಳು ಸೇರಿ 14,700 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ತಾಲೂಕುಗಳ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.