ಕಂದಾಯ ಇಲಾಖೆ ದಾಖಲೆಗಳ ಗಣಕೀಕರಣ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ
ಹಾವೇರಿ 05 : ಕರ್ನಾಟಕ ವಾರ್ತೆ ಬ್ಯಾಡಗಿ ತಾಲೂಕು ತಹಸೀಲ್ದಾರ ಕಚೇರಿಗೆ ಹಾಗೂ ಕಾಗಿನೆಲೆ ನಾಡ ಕಚೇರಿಗೆ ಮಂಗಳವಾರ ಅನೀರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು, ಕಂದಾಯ ದಾಖಲೆಗಳ ಗಣಕೀರಣ ಕಾರ್ಯದ ಪ್ರಗತಿಸಿದ ಪರೀಶೀಲಿಸಿ, ನಿಗಧಿತ ಕಾಲಮಿತಿಯೊಳಗೆ ಗುರಿ ಸಾಧನೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಕೆಲಸದಲ್ಲಿ ಅನಗತ್ಯ ವಿಳಂಬವಾಗದಂತೆ ಕೆಲಸ ನಿರ್ವಹಿಸಬೇಕು, ಸಾರ್ವಜನಿಕ ದೂರುಗಳಿಗೆ ಅವಕಾಶ ನೀಡದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಇದೆ ಸಂದರ್ಭದಲ್ಲಿ ಕಚೇರಿಗೆ ಬಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.ಜಿಲ್ಲೆಯಲ್ಲಿ ನಿರಂತರವಾಗಿ ಪ್ರವಾಸ ಕೈಗೊಂಡು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಮುಂದಾಗಿದ್ದಾರೆ.ಈಗಾಗಲೇ ಜಿಲ್ಲೆಯ ಹಿರೇಕೆರೂರ, ರಟ್ಟೀಹಳ್ಳಿ, ಸವಣೂರ, ರಾಣೇಬೆನ್ನೂರು, ಬ್ಯಾಡಗಿ ತಹಸೀಲ್ದಾರ ಕಚೇರಿ ಹಾಗೂ ಇತರೆ ಕಚೇರಿಗಳಿಗೂ ಭೇಟಿ ನೀಡಿ, ಆಡಳಿತ ಯಂತ್ರದ ವೇಗ ಹೆಚ್ಚಿಸಿದ್ದಾರೆ. ವಿವಿಧ ಕಚೇರಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾರ್ವಜನಿಕ ಸೇವೆ ಒದಗಿಸುವ ಎಲ್ಲ ಕಚೇರಿಗಳು ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಸಾರ್ವಜನಿಕರಿಗೆ ತಲುಪಿಸಬೇಕು. ಪ್ರತಿ 15 ದಿನಕ್ಕೊಮ್ಮೆ ಕಚೇರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅವರುಗಳಿಗೆ ಹಂಚಿಕೆ ಮಾಡಿರುವ ಕೆಲಸಗಳನ್ನು ಪರೀಶೀಲಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಅಧಿಕಾರಿಗಳು ತಮ್ಮ ಕಚೇರಿ ಸಿಬ್ಬಂದಿಗಳೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು, ಇದು ಅವರಲ್ಲಿ ಇನ್ನೂ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಡತಗಳನ್ನು ಅನಗತ್ಯ ವಿಳಂಬ ಮಾಡದೇ ಶೀಘ್ರ ವಿಲೇವಾರಿ ಮಾಡಬೇಕು. ಸಾರ್ವಜನಿಕರ ಕುಂದು ಕೊರತೆಗಳನ್ನು ಆದಷ್ಟು ತುರ್ತಾಗಿ ಪರಿಹರಿಸಬೇಕು ಎಂದು ಸಲಹೆ ನೀಡಿದ್ದಾರೆ.