ಮಾತೃಭಾಷೆಯ ಸ್ಥಾನವನ್ನು ಇತರ ಯಾವ ಭಾಷೆ ತುಂಬಲಾರದು

ಧಾರವಾಡ 06: ಪ್ರಾದೇಶಿಕ ಭಾಷೆಗಳು ತಮ್ಮತನವನ್ನು ಕಳೆದುಕೊಳ್ಳುವ ಶೋಚನೀಯ ಸ್ಥಿತಿಗೆ ತಲುಪಿರುವುದು ಕಳವಳಕಾರಿ ಸಂಗತಿ. ಮನುಷ್ಯನಿಗೆ ಬಹು ಭಾಷೆಯ ಅಗತ್ಯವಿದೆ ಆದರೆ ಮಾತೃಭಾಷೆಯ ಸ್ಥಾನವನ್ನು ಇತರ ಯಾವ ಭಾಷೆಗಳು ತುಂಬಲಾರವು. ಪ್ರಾದೇಶಿಕ ಭಾಷೆಗಳು ತಮ್ಮ ನಿಲುವನ್ನು ಗಟ್ಟಿಗೊಳಿಸುವ ಸ್ಥಿತಿ ಇಂದು ಅತ್ಯಂತ ಅಗತ್ಯವಾಗಿದೆ ಎಂದರು. ಜ್ಞಾನ ತುಂಬಾ ವಿಶಾಲ ಮತ್ತು ಅಮೂಲ್ಯ. ಜ್ಞಾನ ಮನುಷ್ಯನ ವಿಕಾಸಕ್ಕೆ ಅವಕಾಶಿಸುವಂತೆ ಇರಬೇಕು. ಕೊನೆ ಉಸಿರಿರುವವರೆಗೂ ತಿಳಿದುಕೊಳ್ಳುವ ಪ್ರಯತ್ನ ಸಾಗಿರಬೇಕು. ಅಂತಹ ಕಾತುರತೆ ಇದ್ದವ ಮಾತ್ರ ಜ್ಞಾನಿಯಾಗಬಲ್ಲ.  ಮನುಷ್ಯನ ಮಾನಸಿಕ ಸ್ಥಿತಿ ವಿಸ್ತರಿಸಿದಂತೆ ಜ್ಞಾನದ ಕ್ಷಿತಿಜವೂ ಬೆಳೆಯುತ್ತದೆ ಎಂದು ಮೈಸೂರಿನ ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಹೇಳಿದರು. 

ಕರ್ನಾ ಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪಾರ್ವತೆವ್ವ ಹೊಸಕೇರಿ ಸ್ಮಾರಕ ದತ್ತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎನ್ನುವುದಕ್ಕಿಂತ ತಿಳಿದುಕೊಳ್ಳಬೇಕು ಎಂಬ ಹಂಬಲ ಇರುವವರೆಗೆ ಜ್ಞಾನಿಯಾಗಿ ಬೆಳೆಯಬಹುದು, ವಿಶಾಲವಾದ ಜ್ಞಾನವನ್ನು ತಿಳಿದಾಗ ಮಾತ್ರ ಮನುಷ್ಯ ವ್ಯಾಪಕವಾಗಿ ಬೆಳೆಯಲು ಸಾಧ್ಯ ಎಂದರು. 

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಶಿಕ್ಷಣ ನೀತಿಗಳು ಜಾರಿಯಾದಾಗ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ.  ಹೊಸದಾದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೆಲ ದೋಷಗಳಿರಬಹುದು, ಅವುಗಳನ್ನು ಸರಿಪಡಿಸಿ ಜಾರಿಗೆ ತರುವ ಕೆಲಸವಾಗಬೇಕು, ಅದರಲ್ಲಿನ ಬದಲಾವಣೆಗಳನ್ನು ಶಿಕ್ಷಣ ತಜ್ಞರು, ಇತರರು ತಿಳಿಸಿದರೆ ಸಾಲದು. ಸಾಮಾನ್ಯ ಜನರೂ ತಮ್ಮ ಅನಿಸಿಕೆ, ಸಲಹೆಗಳನ್ನು  ನೀಡಿದರೆ ಉತ್ತಮ ಶಿಕ್ಷಣ ನೀತಿ ಬರಲು ಸಾಧ್ಯ ಎಂದರು.

ಭಾರತದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವ ಪ್ರೊ. ಓಂಪ್ರಕಾಶ ನಂದಿಮಠ ಅವರು `ರಾಷ್ಟ್ರೀಯ ಶಿಕ್ಷಣ ನೀತಿ ಕರಡು' ವಿಷಯದ ಮೇಲೆ ಉಪನ್ಯಾಸ ನೀಡಿ, ರಾಷ್ಟ್ರೀಯ ಶಿಕ್ಷಣ ನೀತಿ-2019 ಇದು ಬಹು ವಿಸೃತವಾಗಿದ್ದು, ಇದನ್ನು ಅಂತಿಮಗೊಳಿಸುವವರೆಗೆ ನಮ್ಮ ಸಲಹೆ, ಸೂಚನೆಗಳನ್ನು ನೀಡಬಹುದೇ ಎಂಬುದರ ಬಗ್ಗೆ  ಯಾವುದೇ ಚಕಾರ ಇಲ್ಲದಿರುವುದು ವಿಷಾದನೀಯ. ಜೊತೆಗೆ ಇದು ಸೂಕ್ತ ಸಮಾಲೋಚನೆ ಇಲ್ಲದೇ ತಯಾರಿಸಿದ ನೀತಿಯಾಗಿದೆ ಎಂಬ ಟೀಕೆಯನ್ನೂ ಎದುರಿಸುತ್ತಿದೆ. ಯಾವುದೇ ನೀತಿಯನ್ನು ಕೇವಲ ಸ್ತುತಿಸುವುದು ಅಥವಾ ಟೀಕಿಸುವುದರಿಂದ  ಪ್ರಯೋಜನವಿಲ್ಲ. ಬದಲಾಗಿ ಅಧ್ಯಯನ ಪೂರ್ಣ, ಪ್ರಾಯೋಗಿಕ ಸಲಹೆಗಳನ್ನು ಅಳವಡಿಸಲು ಒತ್ತಾಯಿಸಬೇಕಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ವಿಚಾರ ಒಪ್ಪತಕ್ಕದ್ದು. 2020 ರಲ್ಲಿ ಭಾರತ ಜಗತ್ತಿನ ಅತೀ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರವಾಗಿದ್ದು, ಯುಕ್ತ ಜ್ಞಾನ ತಳಹದಿ ಸೃಷ್ಟಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾ ರಿ ಪ್ರಥಮ ದರ್ಜೆ  ಕಾಲೇಜಿನ ಪ್ರಾಧ್ಯಾಪಕಿ ಡಾ. ವಿನಯಾ ಒಕ್ಕುಂದ `ಸಮಕಾಲೀನ ತಲ್ಲಣಗಳು ಮತ್ತು ಮಹಿಳೆ' ವಿಷಯದ ಮೇಲೆ ಉಪನ್ಯಾಸ ನೀಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳು ಕಳೆದುಹೋಗುವ  ಸಾಧ್ಯತೆಗಳನ್ನು ಕುರಿತು ನಾಡಿನ ಪ್ರಜ್ಞಾವಂತರು ಒಂದೆಡೆ ಕೂತು ಉಳಿಸಿಕೊಳ್ಳುವ ಪ್ರಯತ್ನವಾಗಬೇಕು. ಇಂದಿನ ವ್ಯವಸ್ಥೆ ನಮ್ಮನ್ನು ದಿಕ್ಕುತಪ್ಪಿಸುವ ಪ್ರಯತ್ನದಲ್ಲಿದ್ದು ನಾವು ತುಂಬ ಜಾಗರೂಕತೆಯಿಂದ ಇರಬೇಕಿದೆ. ಹೈದ್ರಾಬಾದ ಎನ್ಕೌಂಟರ ಪ್ರಸ್ತಾಪಿಸಿದ ಅವರು ವಾರದೊಳಗೆ ಆರೋಪಿತರನ್ನು ಮುಗಿಸಿಹಾಕಿದ್ದು ಎಷ್ಟು ಸರಿ ? ಅದು ನ್ಯಾಯವೇ ? ಪ್ರಶ್ನಿಸಿದರೆ ಅಪರಾಧ ಎಂಬಂಥ ವಾತಾವರಣ ಬೆಳೆದು ನಿಂತಿರುವುದು ಭಯವನ್ನುಂಟು ಮಾಡಿದೆ. ಗೊತ್ತಿರುವ ಸತ್ಯವನ್ನು ಮಾತನಾಡಲಾರದವರಾಗಿದ್ದೇವೆ. ಮಹಿಳೆಯ ಪ್ರಶ್ನೆ ಅವಳದಾಗುಳಿದಿಲ್ಲ. ಅದು ದೇಶದ ಪ್ರಶ್ನೆಯಾಗಿದೆ. ನಮ್ಮಲ್ಲಿರುವ ಅಸಮಾನತೆಯನ್ನು ತೊಡೆದುಹಾಕಬೇಕಿದೆ. ಒಳವಿಭಜನೆ ತರದೇ ಮೀಸಲಾತಿಯನ್ನು  ತಂದರೆ ಪ್ರಯೋಜನವಿಲ್ಲ ಎಂದರು. 

ನ್ಯಾಯವಾದಿ, ನಿಕಟಪೂರ್ವ ಭಾರತದ ಸಹಾಯಕ ಸಾಲಿಸಿಟರ ಜನರಲ್, ಕೆ. ಬಿ. ನಾವಲಗಿಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದತ್ತಿ ಪ್ರಯುಕ್ತ ಬಹುಮುಖ್ಯ ವಿಷಯಗಳ ಚಿಂತನೆಗೆ ಅವಕಾಶ ಒದಗಿಸಿದ್ದು ದತ್ತಿಯ ಉದ್ದೇಶವನ್ನು ಸಾರ್ಥಕಗೊಳಿಸಿದೆ ಎಂದು ದತ್ತಿದಾನಿಗಳ ಕಾರ್ಯವನ್ನು ಶ್ಲಾಘಿಸಿದರು. 

ಖ್ಯಾತ ಗಾಯಕಿ ಧಾರವಾಡದ ಜಯಮ್ಮ ದಾನಮ್ಮನವರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪಾರ್ವತೆವ್ವ ಹೊಸಕೇರಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ದತ್ತಿ ದಾನಿ ಗಂಗಾಧರ ಹೊಸಕೇರಿ, ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶಶಿಧರ ತೋಡಕರ ಗಣ್ಯರನ್ನು ಪರಿಚಯಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಸವಪ್ರಭು ಹೊಸಕೇರಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.   

ಡೀನರಾದ ಪ್ರೊ. ಸಿ. ಎಸ್. ಪಾಟೀಲ, ಬಿ. ಡಿ. ಹಿರೇಮಠ,  ಡಾ. ಲಿಂಗರಾಜ ಅಂಗಡಿ, ಡಾ. ಡಿ. ಎಂ. ಹಿರೇಮಠ, ನ್ಯಾಯಾಧೀಶರುಗಳಾದ ಶೇಖರಗೌಡ ಪಾಟೀಲ, ಜಿ. ಎಂ. ಕುಂಬಾರ, ಎಸ್. ಎಚ್. ಮಿಟ್ಟಲಕೋಡ, ಬಳ್ಳೊಳ್ಳಿ, ಎಸ್. ಆರ್. ಸಿಂದಗಿ, ಎಂ. ವಿಜಯಲಕ್ಷ್ಮೀ, ಹೈಕೋರ್ಟ ವಕೀಲರ ಸಂಘದ ಅಧ್ಯಕ್ಷ ಸಿ. ಎಸ್. ಪಾಟೀಲ, ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿದ್ಯಾವತಿ ಕೊಟ್ಟೂರಶೆಟ್ಟರ, ಜಗದೀಶ ಪಾಟೀಲ ಹಾಗೂ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಪ್ರೊ. ಶಿವಾನಂದ ಶೆಟ್ಟರ, ಶಿವಯೋಗಿ ನೀರಲಕಟ್ಟಿ, ಪ್ರಿ. ಶಿವಶಂಕರ ಹಿರೇಮಠ, ಡಾ. ಎಂ. ಡಿ. ಒಕ್ಕುಂದ, ಸಿ. ಯು. ಬೆಳ್ಳಕ್ಕಿ, ಬಿ.ಎಸ್. ಘೋಡಸೆ, ಮಲ್ಲಿಕಾರ್ಜು ನ ಚಿಕ್ಕಮಠ, ನಿಂಗಣ್ಣ ಕುಂಟಿ, ವಿ.ಎಫ್. ಉಳ್ಳಾಗಡ್ಡಿ, ರವೀಂದ್ರ ಹೆಬ್ಬಾಳ್ಕರ,  ಡಾ. ಎ. ಎಸ್. ಸಾಲಂಕಿ ಹಾಗೂ ಹೊಸಕೇರಿ ಕುಟುಂಬದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.