ಕೊಲೆಗಡುಕ ಟಿಪ್ಪು ಜಯಂತಿ ಬೇಡ: ಬಿಜೆಪಿ

ಲೋಕದರ್ಶನ ವರದಿ

ಬೆಳಗಾವಿ 9, ಟಿಪ್ಪು ಸುಲ್ತಾನ ಒಬ್ಬ ನರಹಂತಕ, ಹೇಡಿ, ಹಿಂದೂ ವಿರೋಧಿಯಾಗಿದ್ದನು. ಅವನು ತನ್ನ ಆಡಳಿತಕಾಲದಲ್ಲಿ ಹಲವಾರು ದೇವಾಲಯಗಳು ನಾಶಪಡಿಸಿದನಲ್ಲದೇ, ಬಲವಂತವಾಗಿ ಹಿಂದೂಗಳನ್ನು ಮತಾಂತರಗೊಳಿಸಿದನು. ಅಂತಹ ಮತಾಂಧನ ಜಯಂತಿಯನ್ನು ನ.10 ರಂದು ರಾಜ್ಯ ಸರಕಾರ ಆಚರಿಸಲು ಮುಂದಾಗಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಭಾರತೀಯ ಜನತಾ ಪಕ್ಷದ ಸುರೇಶ ಅಂಗಡಿಯವರು ಶುಕ್ರವಾರದಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿಸುತ್ತ ಹೇಳಿದರು.

ದೇಶ, ನಾಡು-ನುಡಿಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಅದೇಷ್ಟೋ ವ್ಯಕ್ತಿಗಳು ಪವಿತ್ರ ಭರತಭೂಮಿಯಲ್ಲಿ ಆಗಿಹೋಗಿದ್ದಾರೆ. ಅವರ ಜಯಂತ್ಯೋತ್ಸವಕ್ಕೆ ಸರಕಾರ ಮುಂದಾಗಲಿ. ಅಥವಾ ಶಿಶುನಾಳ ಶರೀಫರಂಥ ಮಹಾನ್ ವ್ಯಕ್ತಿಗಳ ಆಚರಣೆ ಮಾಡಲಿ. ಅದೆಲ್ಲ ಬಿಟ್ಟು ಕೇವಲ ಓಟ್ ಬ್ಯಾಂಕ್ನ ಆಮೀಷಕ್ಕೆ ಒಬ್ಬ ಕೊಲೆಗಡುಕನ ಜಯಂತಿ ಆಚರಣೆಗೆ ಸರಕಾರ ಮುಂದಾಗಿರುವುದು ಅಸಹ್ಯಕರ ಸಂಗತಿ. ಕೊಡಗಿನಲ್ಲಿ ಹಿಂದುಗಳ ರಕ್ತದ ನದಿಯನ್ನೇ ಹರಿಸಿದ ಟಿಪ್ಪು ಸುಲ್ತಾನನನ್ನು ಪೂಜಿಸುತ್ತಿರುವುದು ಕೇವಲ ತಮ್ಮ ಓಟ್ ಬ್ಯಾಂಕ್ನ ರಾಜಕೀಯಕ್ಕೋಸ್ಕರ ಮಾತ್ರ ಎಂದು ಅವರು ಹೇಳಿದರು.

ಭಾರತೀಯ ಜನತಾ ಪಾಟರ್ಿ ಟಿಪ್ಪು ಜಯಂತಿಯನ್ನು ಖಂಡಿಸುತ್ತದೆ. ಅದರ ಆಚರಣೆಗೆ ಸರಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಅಲ್ಲದೇ ಟಿಪ್ಪು ಜಯಂತಿಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಒಂದು ವೇಳೆ ಆಚರಣೆಗೆ ಅನುಮತಿ ನೀಡಿದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹಲವರು ಬಿಜೆಪಿ ಗಣ್ಯರೊಂದಿಗೆ ಸೇರಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲಿಸಿದರು.

ಈ ಸಂದರ್ಭದಲ್ಲಿ ಅಭಯ ಪಾಟೀಲ, ವಿಶ್ವನಾಥ ಪಾಟೀಲ, ಮಹೇಶ ಮೊಹಿತೆ, ಧನಂಜಯ ಜಾಧವ, ಶಶಿಕಾಂತ ಪಾಟೀಲ ಮತ್ತಿತರ ಬಿಜೆಪಿ ಪಕ್ಷದ ಧುರಿಣರು ಉಪಸ್ಥಿತರಿದ್ದರು.