ವಿದ್ಯಾರ್ಥಿಗಳಲ್ಲಿ ತಾರತಮ್ಯ ಸಲ್ಲದು-ಡಾ. ಅಜಿತ ಪ್ರಸಾದ
ಧಾರವಾಡ 08: ಶಿಕ್ಷಕರಿಗೆ ಬದ್ಧತೆ, ತಾಳ್ಮೆ, ಸೌಜನ್ಯ ಅತಿ ಮುಖ್ಯ, ನೈತಿಕ ಶಿಕ್ಷಣದ ತಳಹದಿಯ ಮೇಲೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಭೋಧನೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ರೂಢಿಸಿ, ಅವರ ಜವಾಬ್ದಾರಿಗಳ ಬಗ್ಗೆ ಮನನ ಮಾಡಬೇಕು. ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರೇ ದೇವರ ಸ್ಥಾನದಲ್ಲಿದ್ದು, ಶಿಕ್ಷಕರೇ ವಿದ್ಯಾರ್ಥಿಗಳ ಜೀವನಕ್ಕೆ ಭರವಸೆ ಮತ್ತು ಆಶಾದಾಯಕರಾಗಿತ್ತಾರೆ. ಮಕ್ಕಳಲ್ಲಿ ತಾರತಮ್ಯ ಮಾಡದೇ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣವನ್ನು ಶಿಕ್ಷಕರು ನೀಡಬೇಕು.
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಮುಂದಿನ ಉದ್ಯೋಗಾವಕಾಶಗಳ ಬಗ್ಗೆಯೂ ಸಹ ಮಾಹಿತಿ ನೀಡಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿ ಹೊಂದಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ಬೆಂಗಳೂರು ಮತ್ತು ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ ಆಶ್ರಯದಲ್ಲಿ ಜೆ.ಎಸ್.ಎಸ್ ಶಾಲೆಗಳ ಮತ್ತು ಜೆ.ಎಸ್.ಎಸ್ ಐ.ಟಿ.ಐ ಕಾಲೇಜುಗಳ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಶಿಕ್ಷಕರ ಸಹಮಿಲನ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಜೆ.ಎಸ್.ಎಸ್‌ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ದೀಪ ಬೆಳಗಿಸಿ ಉದ್ಘಾಟಿಸಿ, ಭಾರತಾಂಬೆಯ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಶಿಕ್ಷಕರು ಸಕಲ ಕೌಶಲ್ಯಗಳನ್ನು ಹೊಂದಿದವರಾಗಿರಬೇಕು. ಪಠ್ಯವನ್ನಷ್ಟೆ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಅವರ ಸಕಲ ಶ್ರೇಯೋಭಿವೃದ್ಧಿಗೆ ಕಾರಣೀಕರ್ತರಾಗಬೇಕು. ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು. ಸತತವಾಗಿ ಪುಸ್ತಕಗಳ ಒದುವಿಕೆ ಮತ್ತು ದಿನೆ ದಿನೆ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ಹಾಗೂ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳಲ್ಲಿರುವ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಶಿಕ್ಷಕರ ಪುನಶ್ಚೇತನ ಶಿಬಿರಗಳ ಆಯೋಜನೆಯಿಂದ ಶಿಕ್ಷಕರಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಪ್ರಶಿಕ್ಷಣಭಾರತಿ ಸಂಚಾಲಕರಾದ ಡಾ. ಬಸವರಾಜ ತಲ್ಲೂರ ಅವರು ಮಾತನಾಡಿ, ಒಬ್ಬ ಅತ್ಯುತ್ತಮ ಶಿಕ್ಷಕ ತನ್ನ ಶಿಷ್ಯನನ್ನು ಪ್ರತಿಯೊಂದು ಹಂತದಲ್ಲೂ ಮುಂದೆ ಬರುವಂತೆ ಪ್ರೆರೇಪಿಸುತ್ತಾನೆ. ಅಂತಹ ಗುರುಗಳಿಗೆ ವಿದ್ಯಾರ್ಥಿಗಳು ಸದಾ ವಿನಮ್ರರಾಗಿರಬೇಕು. ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಪ್ರಜೆಗಳ ಅವಶ್ಯಕತೆ ಇದ್ದು, ಉತ್ತಮ ಪ್ರಜೆಗಳ ನಿರ್ಮಾಣದ ಜವಬ್ದಾರಿ ಶಿಕ್ಷಕರ ಮೇಲಿದೆ. ಹಾಗಾಗಿ ಶಿಕ್ಷಕರು ಪರಿಣಾಮಕಾರಿ ಭೋಧನೆಗಳ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸ್ಪೂರ್ತಿಯಾಗಬೇಕು. ಶಿಕ್ಷಕರ ಭೋದನಾ ಕೌಶಲ್ಯ ಸುಧಾರಣೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಅತಿಥಿ ಉಪನ್ಯಾಸಗಳು ಹಾಗೂ ತರಬೇತಿಗಳು ಅತ್ಯಂತ ಪರಿಣಾಮಕಾರಿಯಾಗುತ್ತವೆ. ಇಂತಹ ಕಾರ್ಯಕ್ರಮಗಳನ್ನು ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ರಾಜ್ಯದ ಪ್ರತಿಯೊಂದು ಮೂಲೆಯಲ್ಲಿ ಆಯೋಜಿಸುತ್ತಿದೆ ಇಂತಹ ಸಮಾಜಮುಖಿ ಕಾರ್ಯಕ್ರ್ರಮಗಳಿಗೆ ಸದಾ ಕೈಜೊಡಿಸುವ ಜೆ.ಎಸ್.ಎಸ್ ಸಹಾಯ ಸಹಕಾರ ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಧಾರವಾಡದ ಎಸ್.ಆರ್ ತಲ್ಲೂರ ಫೌಂಡೇಶನ್ ವತಿಯಿಂದ ಶಿಕ್ಷಕರಿಗೆ ಪ್ರಯೋಜನವಾಗುವ ಸಾಮಾಜಿಕ ಕಳಕಳಿಯ ಮತ್ತು ಉತ್ತಮ ಮೌಲ್ಯಗಳನ್ನು ಸಾರುವ ಪುಸ್ತಕಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಮೊದಲ ಅವಧಿಯಲ್ಲಿ ಸಂಸ್ಕೃತ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಧ್ಯಾಪಕರಾದ ವಿನಾಯಕ ಭಟ್ ಶೇಡಿಮನಿ ಅವರು ಪಂಚಪರಿವರ್ತನೆ ವಿಷಯದ ಮೇಲೆ ಮತ್ತು ಎರಡನೆಯ ಅವಧಿಗೆ ತಾಳಮದ್ದಳೆಯ ಪ್ರಸಿದ್ಧ ಅರ್ಥಾಧಿಕಾರಿಗಳು, ಗಣಿತ ಶಿಕ್ಷಕರಾದ ಪ್ರೋ. ಎಮ್.ಎನ್ ಹೆಗಡೆಯವರು ಸಮಾಜದ ದೃಷ್ಟಿಯಲ್ಲಿ ಶಿಕ್ಷಕ ವಿಷಯದ ಮೇಲೆ ಅತಿಥಿ ಉಪನ್ಯಾಸ ನೀಡಿದರು. ಪ್ರಶಿಕ್ಷಕಣ ಭಾರತಿ ಧಾರವಾಡ ವೀಭಾಗದ ಸಂಯೋಜಕರಾದ ವೀರೇಂದ್ರಗೌಡ ಪಾಟೀಲ್ ಸಮಾರೋಪ ಸಮಾರಮಬ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಜೆ.ಎಸ್.ಎಸ್ ಐ.ಟಿ.ಐ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ, ಶಾಲಾ ಪ್ರಾಚಾರ್ಯೆಯರಾದ ಮೈನಾವತಿ ದಿವಟೆ, ರೇಣು ಪಾಟೀಲ್, ವಿದ್ಯಾ ಕೊಲ್ಹಾಪುರೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ದೀಪಾ ಕುಲಕಣೀ ಪ್ರಾರ್ಥಿಸಿದರು, ಮಂಜುನಾಥ ಚಟ್ಟೇರ ನಿರೂಪಿಸಿದರು, ಮಹೇಶ ಬಗಲಿ ವಂದಿಸಿದರು.