ರೈತರ ಮಕ್ಕಳಿಗೆ ಇಲ್ಲ ಬೆಳಕಿನಲ್ಲಿ ಓದುವ ಭಾಗ್ಯ ಸಮೀಪಿಸುತ್ತಿರುವ ಪರೀಕ್ಷೆ: ಸತಾಯಿಸುತ್ತಿರುವ ವಿದ್ಯುತ್ ಸಮಸ್ಯೆ
ಇಂಡಿ 08: ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಈ ದೇಶದಲ್ಲಿ ಬಹುಸಂಖ್ಯಾತರು ರೈತರೇ ಇದ್ದಾರೆ, ಆದರೆ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಹೌದು ನಾವು ಹೇಳುತ್ತಿರುವುದು ಇಂಡಿ ತಾಲೂಕಿನ ತಡವಲಗಾ ಗ್ರಾಮದ ರೈತರ ಗೋಳು, ತಡವಲಗಾ ಗ್ರಾಮದಲ್ಲಿ ಸುಮಾರು ಶೇಕಡಾ ಶೇ. 80ರಷ್ಟು ಜನರು ತೋಟದ ವಸತಿಯಲ್ಲಿ ವಾಸವಾಗಿದ್ದಾರೆ. ಹಾಗಾದರೆ ಅವರ ಸಮಸ್ಯೆ ಏನು ಎಂಬುದು ತಮಗೇ ಕುತೂಹಲ ಆಗಿರಬಹುದು? ಆ ನಿಜ ಸಮಸ್ಯೆ ಹೇಳುತ್ತೇವೆ ಕೇಳಿ, ಅಡವಿ ತೋಟದಲ್ಲಿ ವಾಸವಾಗಿದ್ದ ರೈತರಿಗೆ ಸಂಜೆ ಆದರೆ ಸಾಕು ಇನ್ನು ಇಲ್ಲದ ಭಯ, ಒಂದೆಡೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಳ್ಳರ ಹಾವಳಿ ಹಾಗೂ ಇನ್ನೊಂದೆಡೆ ಮಕ್ಕಳ ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳ ಅಭ್ಯಾಸದ ಚಿಂತೆ, ಇದಕ್ಕೆ ಕಾರಣ ಹೆಸ್ಕಾಂ ಅಧಿಕಾರಿಗಳು. ರೈತರಿಗೆ ಸಂಜೆ ಹೊತ್ತಿಗೆ ಟು ಫೇಸ್ ವಿದ್ಯುತ್ ನೀಡದೆ ರೈತರ ಹಾಗೂ ರೈತರ ಮಕ್ಕಳ ಜೊತೆ ಚೆಲ್ಲಾಟ ಆಡುತ್ತಾ ರೈತರಿಗೆ ಹಾಗೂ ರೈತರ ಮಕ್ಕಳಿಗೆ ಒಂದು ರೀತಿಯಲ್ಲಿ ಹಿಂಸೆ ನೀಡುತ್ತಿರುವುದು ನೋಡಿದರೆ, ಅಧಿಕಾರಿಗಳ ನಡೆ ಸಾರ್ವಜನಿಕರಲ್ಲಿ ಸಂಶಯವನ್ನು ಉಂಟು ಮಾಡುತ್ತಿದೆ.
ಈ ರೈತರ ಸಮಸ್ಯೆ ಕುರಿತು ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ನೀಡುವ ಉತ್ತರವೇ ಬೇರೆ. ಹಾಗಾದರೆ ಕೇಳುವುದಾದರು ಯಾರನ್ನು ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಅವರು ಹೇಳುವುದು ಏನೆಂದರೆ ನಮಗೆ ಮೇಲಾಧಿಕಾರಿಗಳ ಆದೇಶವಿದೆ, ಸಂಜೆ ಆರು ಗಂಟೆಯಿಂದ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಉತ್ತರ ನೀಡುತ್ತಾರೆ. ರೈತರಿಗೆ ಕಾಡದೆ ಹೋದರೆ ಉಂಡ ಅನ್ನ ಕರಗುತ್ತಿಲ್ಲ ಅನಿಸುತ್ತದೆ ಆ ಅಧಿಕಾರಿಗಳಿಗೆ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು, ಶಾಸಕರು, ಹಾಗೂ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ಕೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ಇಲ್ಲವಾದರೆ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ.