“ಗಜಲ್ ಗಮಲು”
ಒಲವಿನ ಸರಿಗಮಕೆ ಸೋಲದ ಹೃದಯಗಳಿಲ್ಲ ಗಾಲಿಬ್
ಮಿಡಿಯುವ ಮನದ ವೀಣೆಯ ತಂತಿ ಕತ್ತರಿಸಿದವರೆ ಹೆಚ್ಚು
ಈ ಜಗತ್ತು ಪ್ರೀತಿಯೆಂಬ ಎರಡಕ್ಷರಕ್ಕೆ ಸೋತು ಶರಣಾಗಿದೆ. ಒಲವಿನ ತೋಳ ತೆಕ್ಕೆಗೆ ಸಿಲುಕದ ಹೃದಯಗಳೇ ಇಲ್ಲ. ಬೆರೆತ ಮನಗಳನ್ನು ಬೇರಿ್ಡಸಿ ಕ್ರೂರತೆ ಮೆರೆಯುವವರೇ ತುಂಬಿದ್ದಾರೆ ಎಲ್ಲೆಡೆ ಎಂಬ ಭಾವ ಪ್ರತಿಬಿಂಬಿಸುವ ಗಜಲ್‌ನ ಈ ಸಾಲುಗಳು ನಿರ್ಮಲಾ ರಾ. ಪಾಟೀಲ ಅವರದು. ಕಾನೂನು ಪದವಿಯನ್ನು ಪೂರ್ಣಗೊಳಿಸಿರುವ ಇವರು ಸದ್ಯಕ್ಕೆ ಬೆಳಗಾವಿಯಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಸಾಹಿತ್ಯಿಕ ಚಟುವಟಿಕೆಯಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ. ಗಜಲ್, ಕವಿತೆ, ಜಾನಪದ ಸಾಹಿತ್ಯ, ಸಣ್ಣ ಕಥೆಗಳ ಬರವಣಿಗೆಯಲ್ಲಿ ಕೃಷಿ ಮಾಡುತ್ತಿರುವ ನಿರ್ಮಲಾ ಪಾಟೀಲ ಇತ್ತೀಚೆಗೆ ತಮ್ಮ ಪ್ರಥಮ ಗಜಲ್ ಸಂಕಲನ ‘ನಿರಾ ಗಜಲ್’ ಪ್ರಕಟಿಸಿದ್ದಾರೆ. ಅವರ ಗಜಲ್ ಸಂಕಲನದಿಂದ ಆಯ್ದ ಒಂದು ಗಜಲ್‌ನ ಓದು ಮತ್ತು ಅದರ ಒಳಧ್ವನಿ ಗಜಲ್ ಪ್ರಿಯರಿಗಾಗಿ.
ಗಜಲ್
ಬತ್ತಿ ಹೊಸದಂಗ ಹೊಸದ್ರ ಮನಸಿಗಿ ನೋವಾಕ್ಕೈತಿ
ಚೂರಿ "ಡಿದನ ಚುಚ್ಚಿದ್ರ ಮನಸಿಗಿ ನೋವಾಕ್ಕೈತಿ
ಪ್ರೀತಿ ಅಂದ್ರ ಸಮಯ ಕಳ್ಯೋ ಆಟ ಆಗೈತಿ ನಿನಗ
ಉಸಿರ ಬಿಗಿ"ಡದ ಕುತ್ತಿಗಿ ಒತ್ತಿದ್ರ ಮನಸಿಗಿ ನೋವಾಕ್ಕೈತಿ
ಯಾರಿಗೂ ನೋವ ಬ್ಯಾಡಂತ ಹಕ್ಕಿಗೆ ನೀರ ಇಟ್ಟೀನಿ
ಕವಣಿ ಕಟ್ಟಿ ಕಲ್ಲ ಬೀಸಿದ್ರ ಮನಸಿಗಿ ನೋವಾಕ್ಕೈತಿ
ಹಸರನ್ಯಾಗ ಕುಂತ ಹಾದಿ ಕಾಯಾಕತ್ತೀನಿ ಬರಲಿಲ್ಲ
ಕಟ್ಟಿದ ಜೇನಗೂಡ ಒಡದ್ರ ಮನಸಿಗಿ ನೋವಾಕ್ಕೈತಿ
'ನಿರಾ' ಹುಚ್ಚರಂಗ ನೆನಪಗೊಳನ ಗೀಚಾಕತ್ತಾಳು
ಭಾವಗೀತೆ ಬರದಿನಿ ಶೋಕಗೀತೆ ಹಾಡಿದ್ರ ಮನಸಿಗಿ ನೋವಾಕ್ಕೈತಿ
- ನಿರ್ಮಲಾ ರಾ. ಪಾಟೀಲ
‘ಮತ್ತೆ ಮತ್ತೆ ನಾನು ಅದೇ ತಪ್ಪು ಮಾಡುತ್ತೇನೆ, ಮನುಷ್ಯನಲ್ಲವೆ? ಮನುಷ್ಯರನ್ನೇ ಪ್ರೀತಿಸುತ್ತೇನೆ’ ಎಂದು ಕವಿ ತುಂಬ ಆರ್ದ್ರವಾಗಿ ಬರೆಯುತ್ತಾನೆ. ಇಂದು ಪ್ರೀತಿ, ಪ್ರೇಮ, ಒಲವು ಎಲ್ಲವೂ ಕೃತಕತೆಯ ಸೋಗನ್ನು ಧರಿಸಿ ನಿಂತಿವೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ವಾಸ್ತವದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಪ್ರೀತಿಯನ್ನು ಹುಡುಕುವುದು ಸಾಧ್ಯವೇ ಇಲ್ಲ ಎಂಬಷ್ಟು ಲೋಕ ಯಾವ್ಯಾವುದೋ ಹುಚ್ಚಿನ ಹಿಂದೆ ಬಿದ್ದಿದೆ. ನಿಜ ಪ್ರೀತಿ ಮುಖವಾಡ ಕಳೆದುಕೊಂಡು ಬಯಲಾಗುವುದು ಅದೆಷ್ಟೊತ್ತಿನ ಮಾತು? ಇಷೆಲ್ಲ ಆದರೂ ಪ್ರೀತಿಯ ಹಿಂದೆ ಬೀಳದ, ಅದಕ್ಕಾಗಿ ಪರಿತಪಿಸದ, ಅದನ್ನೇ ಧ್ಯಾನಿಸಿ ಕನವರಿಸುವ ಹೃದಯಗಳೇನೂ ಕಡಿಮೆ ಇಲ್ಲ. ಪ್ರೀತಿಯ ಇನ್ನೊಂದು ಮುಖವೇ ವಿರಹ, ನೋವು, ವಿಷಾದ. ಅಂತಹ ಪ್ರೀತಿಯ ವಿಷಾದವನ್ನು ಅಭಿವ್ಯಕ್ತಿಸುವ ನಿರ್ಮಲಾ ಪಾಟೀಲ ಅವರ ಗಜಲ್, ಪ್ರೀತಿ ಉಳಿಸಿಕೊಳ್ಳಲು ಒಳಿತನ್ನೇ ಮಾಡಲು ಹವಣಿಸುತ್ತದೆ. ಸಾಕಷ್ಟು ಸಮಜಾಯಿಷಿಗಳನ್ನು ಕೊಟ್ಟರೂ ಕರಗದ ಕಲ್ಲೆದೆಯ ಇದಿರು ವ್ಯರ್ಥವಾಗಿ ಪ್ರಾರ್ಥಿಸುವ ಗಜಲ್ ಇಷ್ಟವಾಗುತ್ತದೆ. ಈ ಗಜಲ್‌ನ ಇನ್ನೊಂದು ವಿಶೇಷತೆಯೇನೆಂದರೆ ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ರಚನೆಯಾಗಿರುವುದು.
ವಿನಾಕಾರಣ ಪ್ರೀತಿಯಲ್ಲಿ ಮುಖ ತಿರುವಿ ಹೋಗುವ ಮನಸಿಗೆ ತಾನುಂಡ ನೋವುಗಳ ಕುರಿತಾಗಿ ತಿಳಿ ಹೇಳುವ ಗಜಲ್, ತೀರಾ ಇಷ್ಟು ಕಟುಕನಾದರೆ ಹೇಗೆ? ತೀವ್ರವಾಗಿ ನೋವು ತಿನ್ನಲು ಹೃದಯಕ್ಕೆ ಆಗುವುದಿಲ್ಲ. ‘ನೋಯಿಸಬೇಡ ನನ್ನ ದೊರೆ’ ಯಾವುದೇ ಆಯುಧವಿಲ್ಲದೆ ಘಾಸಿಗೊಳಿಸುವ ನಿನ್ನ ವರ್ತನೆ ತಾಳಿಕೊಳ್ಳುವ ತಾಕತ್ತಿಲ್ಲ ಮನಸಿಗೆ ಎನ್ನುತ್ತದೆ. ಈಗೀಗ ಪ್ರೀತಿ ‘ಟೈಮ್ ಪಾಸ್’ಗೆ ಎಂಬಂತೆ ಆಗಿ ಹೋಗಿದೆ. ಅದರ ಮಧುರ ಅನುಭೂತಿ, ಬಿಟ್ಟಿರಲಾರದ ನಂಟು, ಜೀವಕ್ಕೆ ಜೀವ ಕೊಡುವ ಭಾವ ಇವ್ಯಾವೂ ಅರ್ಥವಾಗುತ್ತಿಲ್ಲ ಪ್ರೀತಿಸುವವರಿಗೆ. ಸಮಯ ಕಳೆಯಲು ಮಾಡಿದ ಪ್ರೀತಿ ಇನ್ನೆಷ್ಟು ದಿನ ಉಳಿಯಲು ಸಾಧ್ಯ? ಅಂತಹವರೇ ಅಲ್ಲವೆ, ತೀರದ ಗಾಯವನ್ನು ಮಾಡಿ ಹೋಗುವುದು? ಪುಟ್ಟ ಹಕ್ಕಿಗೂ ತೊಂದರೆ ಮಾಡದ ಮನಸ್ಥಿತಿ ಇರುವಂತ ನಾನೆಲ್ಲಿ? ಅಮಾಯಕ ಹಕ್ಕಿಯನ್ನು ಕೊಂದು ನಗುವ ನೀನೆಲ್ಲಿ? ಈ ರೀತಿಯ ವೈರುಧ್ಯದ ಭಾವಗಳು ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ನೀ ಬರುವ ಕಣ್ಣುಗಳ ಹರವಿ, ನಿನ್ನ ನೀರೀಕ್ಷೆಯಲ್ಲಿಯೇ ಉಳಿದುಬಿಟ್ಟೆ, ನೀನೋ ಯಾವೂರ ಹರಿಕಾರನಾದೆಯೋ? ಜತನದಿಂದ ಕಟ್ಟಿಕೊಂಡಿದ್ದ ಜೇನುಗೂಡಿನಂಥ ಪ್ರೀತಿಗೂಡನ್ನು ಒಡೆದು ಹೋದೆ, ನೋವಾಗದೆ ಇರುತ್ತದೆಯೇ? ನಿನ್ನ ನೆನಪಿನ ಆಸರೆಯಲ್ಲಿಯೇ ಉಳಿದ ದಿನಗಳನ್ನು ಕಳೆಯುತ್ತಿದ್ದೇನೆ. ನಾ ಬರೆದ ಭಾವಗೀತೆಗಳ ಬದಲಿಗೆ ನೀ ಶೋಕಗೀತೆ ಹಾಡಿದರೆ ಎದೆಗೆ ತಿದಿಯೊತ್ತುವ ಯಾತನೆಯ ಭಾವಗಳು ಮಮ್ಮಲ ಮರುಗುತ್ತವೆ.
‘ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ, ಒಡೆಯಬೇಡ ಒಲವಿಲ್ಲದೆ ನೋಯುತ್ತಿರುವ ಹೃದಯ’ ಎಂಬ ಭಾವಗೀತೆ ನೆನಪಿಗೆ ತರಿಸುವಂಥ ಗಜಲ್ ಬರೆದ ಕವಯಿತ್ರಿಗೆ ನಮನಗಳು.
- ನಾಗೇಶ್ ಜೆ. ನಾಯಕ
ಶಿಕ್ಷಕರು
ಮೊ. 9900817716
- * * * -