ಬಳ್ಳಾರಿಯಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ

Nijasaran Shri Ambigar Choudaiya Jayantyotsava in Bellary

ಬಳ್ಳಾರಿಯಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ 

ಬಳ್ಳಾರಿ 21: ಹನ್ನೆರಡನೇ ಶತಮಾನದಲ್ಲಿ ದಿಟವನ್ನೆ ನುಡಿದ ದಿಟ್ಟ ಶರಣರು ಇವರು. ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ನಿಜಶರಣ ಅಂಬಿಗರ ಚೌಡಯ್ಯ ಅವರ ಮಾತು ಕಟುವಾದರೂ ನೇರನುಡಿ ಹೊಂದಿದವರು ಎಂದು ಬಳ್ಳಾರಿ ತಾಲ್ಲೂಕು ತಹಸೀಲ್ದಾರ ಗುರುರಾಜ್ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದಲ್ಲಿ ಮಂಗಳವಾರ ಏರಿ​‍್ಡಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಅಜ್ಞಾನದಿಂದ ಜ್ಞಾನದ ಕಡೆ, ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ನಿಜ ಶರಣರು ಅಂಬಿಗರ ಚೌಡಯ್ಯನವರು. ಸಮಾಜದಲ್ಲಿನ ಅನಾಚಾರ, ಅನೈತಿಕತೆಯನ್ನು ನಿರ್ಭಿತಿಯಿಂದ ಕಟುವಾಗಿ ಟೀಕಿಸಿದವರು. ತನ್ನ ವಚನಗಳನ್ನು ವೈಚಾರಿಕವಾಗಿ ನಿರೂಪಿಸಿ ಮಹಾ ಮಾನವತವಾದಿಯಾಗಿದ್ದರು ಎಂದು ತಿಳಿಸಿದರು. 

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯನವರು 12 ನೇ ಶತಮಾನದ ಬಸವಣ್ಣನವರ ಅನುಯಾಯಿಯಾಗಿದ್ದರು. ಹಾವೇರಿ ಜಿಲ್ಲೆಯ ಚೌಡದಾನಪುರ ಗ್ರಾಮದಲ್ಲಿ ಕ್ರಿ.ಶ.1120 ರಲ್ಲಿ ತಂದೆ ವಿರೂಪಾಕ್ಷ ಹಾಗೂ ತಾಯಿ ಪಂಪಾದೇವಿಯ ಮಗನಾಗಿ ಜನಿಸಿದವರು ಎಂದು ಹೇಳಿದರು. 

ವಚನಕಾರ ಅಂಬಿಗರ ಚೌಡಯ್ಯ ಎಲ್ಲಾ ಶರಣರಂತೆ ಕಾಯಕಯೋಗಿಯಾಗಿದ್ದು, ದೋಣಿ ನಡೆಸುವುದು ಅವರ ಕಾಯಕವಾಗಿತ್ತು. ಅಂಬಿಗ ಎಂದರೆ ದೋಣಿ ನಡೆಸುವವರು ಎಂದು ಹೇಳಲಾಗುತ್ತದೆ. ವಚನಕಾರ ಅಂಬಿಗರ ಚೌಡಯ್ಯ ಎಂಬ ಅಂಕಿತನಾಮದೊಂದಿಗೆ ಸುಮಾರು 279 ವಚನಗಳನ್ನು ಬರೆದರು. ಅವರ ಪದ್ಯಗಳು ಅವರ ಆಳವಾದ ಅನುಭವಗಳು ಮತ್ತು ಸಾಮಾಜಿಕ ಪ್ರಜ್ಞೆಯ ಪ್ರತಿಬಿಂಬವಾಗಿದ್ದು, ಅವುಗಳನ್ನು ಕೇಳುವ ಎಲ್ಲರ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ ಎಂದು ಹೇಳಿದರು. 

ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದವರು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಎಮ್ಮಿಗನೂರಿನ ರಾಜು ತಂಡದಿಂದ ವಚನ ಗಾಯನ ಮತ್ತು ಸಿರುಗುಪ್ಪದ ಕೀರ್ತಿ ಅವರಿಂದ ನೃತ್ಯ ಪ್ರದರ್ಶನ ಪ್ರಸ್ತುತ ಪಡಿಸಿದರು. 

ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಗಂಗಾಮತಸ್ಥ ಸಂಘದ ಅಧ್ಯಕ್ಷ ಬಿ.ಮೌಲಾಲಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಅದ್ದೂರಿ ಮೆರವಣಿಗೆ: 

ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು. 

ಮೆರವಣಿಗೆಯು ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದಿಂದ  ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ರೈಲ್ವೆ ಸ್ಟೆಷನ್, ಹೆಚ್‌.ಆರ್‌.ಗವಿಯಪ್ಪ ವೃತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.