ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ: ಡಿಸಿಎಂ ಡಿಕೆ.ಶಿವಕುಮಾರ್

ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ: ಡಿಸಿಎಂ ಡಿಕೆ.ಶಿವಕುಮಾರ್ New tourism policy for the development of coastal areas: DCM DK Shivakumar

ಕಾರವಾರ 29: ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಅವರು ಭಾನುವಾರ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಹಾಗೂ ಜಿಲ್ಲಾಡಳಿತ ಉತ್ತರ ಕನ್ನಡ ಇವರ ಸಂಯೋಗದಲ್ಲಿ ಆಯೋಜಿಸಲಾದ ಕರಾವಳಿ ಉತ್ಸವ 2025 ರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ರಚಿಸುವ ಕುರಿತಂತೆ ಜನವರಿ 10 ರಂದು 3 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಪಶ್ಚಿಮ ಘಟ್ಟಕ್ಕೆ ಮತ್ತು ಮಲೆನಾಡಿಗೆ ಪ್ರತ್ಯೇಕವಾದ ಪ್ರವಾಸಿ ನೀತಿಯನ್ನು ಮಾಡಿ, ಹೊರಗಡೆಯಿಂದ ಉದ್ದಿಮೆದಾರರು ಬಂದು ಇಲ್ಲಿಯೇ ಬಂಡವಾಳ ಹೂಡಬೇಕು. ಇಲ್ಲಿನ ಯುವಕರು ಬೆಂಗಳೂರು, ಮುಂಬೈ, ಸೌದಿ, ಗೋವಾ ಹೊರ ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ ಮನೆ ಬಾಗಲಿಗೆ ಉದ್ಯೋಗವನ್ನು ಸೃಷ್ಠಿಮಾಡಸಬೇಕೆಂಬ ನಿಟ್ಟಿನಲ್ಲಿ ಹೊಸ ಉದ್ಯೋಗ ನೀತಿ ಮತ್ತು ಪ್ರವಾಸಿ ನೀತಿ ಮಾಡಬೇಕು ಎಂದು ಸರ್ಕಾರ ಚಿಂತನೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಎಂದಿಗೂ ಬೆಂಬಲ ನೀಡುತ್ತೇನೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. 

ಸಮುದ್ರ ಎಂದರೇ ಒಂದು ದೊಡ್ಡ ಶಕ್ತಿ, ಮೀನುಗಾರಿಗೆ ಇಲ್ಲಿನ ಬದುಕಿಗೆ ದೊಡ್ಡ ಆಧಾರ, ಇಲ್ಲಿ ಪ್ರವಾಸಿಗರ ಸ್ವರ್ಗವನ್ನು ಕಾಣಬಹುದು. ಇಲ್ಲಿನ ಜನ ಸಾಮಾನ್ಯರ ಸಂತೋಷದ ದೃಷ್ಠಿಯಿಂದ, ಜಿಲ್ಲೆಯ ಕಲಾವಿದರಿಗೆ, ಇಲ್ಲಿನ ಸಂಪ್ರದಾಯ, ಆಚಾರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕಾಗಿ ಕರಾವಳಿ ಉತ್ಸವದಂತಹ ದೊಡ್ಡ ಕಾರ್ಯಕ್ರಮ ಮಾಡಿ ಸಚಿವರು ಇಡೀ ಸರ್ಕಾರಕ್ಕೆ ಗೌರವವನ್ನು ತಂದಿದ್ದಾರೆ ಎಂದರು.  

ಸಮುದ್ರ ಅಂದರೆ ಸಂಪತ್ತು ಮತ್ತು ಜ್ಞಾನದ ಬಲ, ಬದುಕಿಗೆ ಒಂದು ಆದರ್ಶವನ್ನು ಇಟ್ಟುಕೊಳ್ಳಬೇಕು, ಸಾಧನೆಗೆ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಇಂತಹ ಕಾರ್ಯಕ್ರಮವು ಸಾವಿರಾರು ಯುವಕರ ತಮ್ಮಲ್ಲಿ ಅಡಗಿರುವ ಚಿತ್ರಕಲೆ, ಕ್ರೀಡೆ, ಜನಪದ ಲೋಕ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಇಂತಹ ವೇದಿಕೆಗಳು ದಾರಿಯಾಗಲಿವೆ ಎಂದರು. 

ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಗೋವಾ, ಮಂಗಳೂರು, ಉಡುಪಿ ಜಿಲ್ಲೆಗಳ ಮೊರೆ ಹೋಗಬೇಕು ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ಮಾಡಬೇಕು ಎಂಬ ಸತೀಶ್ ಸೈಲ್ ಅವರು ಬೇಡಿಕೆಗೆ ನಾನು ಕೂಡ ಬೆಂಬಲ ನೀಡುತ್ತೇನೆ ಎಂದರು. 

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಮಾತನಾಡಿ, ಕರಾವಳಿ ಉತ್ಸವಕ್ಕೆ 30 ವರ್ಷಗಳ ಇತಿಹಾಸವಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಮುಂದುವರೆಸಿಕೊಂಡು ಹೋಗಬೇಕು. ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡವಂತಾಗಬೇಕು. ನಮ್ಮ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಕಲೆಗಳು ಇಂದಿಗೂ ಜೀವಂತವಾಗಿದೆ. ಬಡವರು, ರೈತರು, ಕಾರ್ಮಿಕರು ವರ್ಷವಿಡಿ ಕೆಲಸ ಮಾಡುವುದು ಬಿಟ್ಟು  ಬೇರೇನು ಗೊತ್ತಿಲ್ಲ, ಅವರಿಗೆ ಮನರಂಜನೆಗಾಗಿ ಮತ್ತು ಸ್ಥಳೀಯ ಕಲಾವಿದರಿಗೆ, ಸಾಮಾನ್ಯರಿಗೆ, ಬಡವರಿಗೆ ಸೂಕ್ತ ವೇದಿಕೆ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಕರಾವಳಿ ಉತ್ಸವನ್ನು ಆಯೋಜಿಸಲಾಗಿದೆ ಎಂದರು.   

ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ ಸೈಲ್ ಮಾತನಾಡಿ, ಕರಾವಳಿ ಉತ್ಸವ ಸಪ್ತಾಹದಲ್ಲಿ  ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದ್ದು, ಪ್ರತಿದಿನ 40 ರಿಂದ 50 ಸಾವಿರ ಜನರು ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದಾರೆ. ಜಿಲ್ಲೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು  

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕರಾವಳಿ ಉತ್ಸವ 7 ದಿನಗಳ ಕಾಲ ಬಹಳ ಅದ್ಬುತವಾಗಿ, ವಿಭೃಂಜಣೆಯಿಂದ ನಡೆದಿದ್ದು, ಜಿಲ್ಲೆಯು ಕರಾವಳಿ, ಗುಡ್ಡಗಾಡು, ಅರೆ ಮಲೆನಾಡು, ಮಲೆನಾಡನ್ನು ಹೊಂದಿರುವ ಒಂದು ಬಹಳ ಸುಂದರವಾದ ಜಿಲ್ಲೆಯಾಗಿದೆ. ಸಂಗೀತ, ಯಕ್ಷಗಾನ, ಕಲೆ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆಯ ಅನೇಕ ಪ್ರತಿಭಾವಂತರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ಪಿ ನಾಯ್ಕ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ  ಕಾರ್ಯದರ್ಶಿ ಮೊಹಮ್ಮದ ಮೊಹೀಸಿನ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದೀಲೀಷ್ ಶಶಿ, ಪೊಲೀಸ್  ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.