ಜಿಲ್ಲಾ ಹಾಲು ಒಕ್ಕೂಟಕ್ಕೆ ಆಯ್ಕೆಗೊಂಡ ನೂತನ ನಿರ್ದೇಶಕರಿಗೆ ಸನ್ಮಾನ

ಮುನವಳ್ಳಿ 10: ಪಟ್ಟಣದ ದ್ಯಾಮನಗೌಡರ ಕಾಂಪ್ಲೆಕ್ಸ್ನಲ್ಲಿ ಸವದತ್ತಿ ತಾಲೂಕಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ವತಿಯಿಂದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟಕ್ಕೆ ನೂತನವಾಗಿ ಆಯ್ಕೆಗೊಂಡ ನಿರ್ದೇಶಕರುಗಳಿಗೆ  ಗೌರವ ಸನ್ಮಾನ ಜೂ. 9 ರಂದು ರಾತ್ರಿ ಜರುಗಿತು.

    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬೆಳಗಾವಿ ಡಿ.ಸಿ.ಸಿ.ಬ್ಯಾಂಕ ನಿರ್ದೇಶಕ  ಪಂಚನಗೌಡ ದ್ಯಾಮನಗೌಡರ ಸಹಕಾರಿ ಸಂಘಗಳಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಂಡು ಸಹಕಾರಿ ಸಂಘಗಳಿಂದ ದೊರೆಯುವ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಜೊತೆಗೆ ಕೃಷಿಯೊಂದಿಗೆ ಹೈನೋದ್ಯಮವನ್ನು ಉಪಕಸುಬನ್ನಾಗಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ರಾಜ್ಯದಲ್ಲಿ ಕ್ಷೀರಕ್ರಾಂತಿಗೆ ರೈತರು ಸಾಕ್ಷಿಯಾಗಬೇಕು. ಜಿಲ್ಲೆಯಲ್ಲಿ ಹಾಲು ಒಕ್ಕೂಟದ ಆಡಳಿತ ಮಂಡಳಿಯವರ ಶ್ರಮದಿಂದ ಕೆ.ಎಂ.ಎಫ್.ಪ್ರಗತಿಯತ್ತ ಸಾಗುತ್ತಿರುವುದು ಶ್ಲಾಘನೀಯ ಎಂದರು. ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಸ್ಪರ ಸಹಕಾರದಿಂದ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದರು. 

    ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಮುರುಘೇಂದ್ರ ಮಹಾಸ್ವಾಮಿಗಳು ಗ್ರಾಮೀಣಾಭಿವೃದ್ಧಿಯಲ್ಲಿ ಹಾಲು ಉತ್ಪಾದಕರ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಇನ್ನೂ ಹೆಚ್ಚಿನ ಸೌಲಭ್ಯವನ್ನು ಹಾಲು ಒಕ್ಕೂಟ ಹಾಗೂ ಉತ್ಪಾದಕರಿಗೆ ಒದಗಿಸಬೇಕು ಎಂದರು.

 ಅಧ್ಯಕ್ಷತೆಯನ್ನು ಮುಗಳಿಹಾಳ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರಾಮನಗೌಡ ಗಂಗರೆಡ್ಡಿ ವಹಿಸಿದ್ದರು.

    ಬೆಳಗಾವಿ ಹಾಲು ಒಕ್ಕೂಟದ ನೂತನ ನಿರ್ದೇಶಕರಾದ  ಎಸ್.ಎಸ್.ಮುಗಳಿ, ಉದಯಸಿಂಹ ಶಿಂಧೆ, ಡಾ. ಬಸವರಾಜ ಪರದನ್ನವರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಅತಿಥಿಗಳಾಗಿ ಹಾಲು ಒಕ್ಕೂಟದ ವಿಸ್ತೀರ್ಣಾಧಿಕಾರಿಗಳಾದ ಟಿ.ಆರ್.ಪಾಟೀಲ, ಮಲಪ್ರಭಾ ಗಾಣಗಿ, ಶಂಕರಗೌಡ ಪಾಟೀಲ, ಬಾಬು ಮಾಟನವರ, ಕಲ್ಲಪ್ಪ ನಲವಡೆ, ಅರ್ಜುನ  ಸವದತ್ತಿ, ಸೇರಿದಂತೆ ಸವದತ್ತಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಇದ್ದರು. 

    ಮಹಾಂತೇಶ ಗೋಮಾಡಿ ಸ್ವಾಗತಿಸಿದರು. ಬಾಳು ಹೊಸಮನಿ ನಿರೂಪಿಸಿದರು.