ಲೋಕದರ್ಶನ ವರದಿ
ಕೊಪ್ಪಳ 12: ನಗರದ ಸಾಹಿತ್ಯ ಭವನದಲ್ಲಿ ಆಗಷ್ಟ್ 18 ರವಿವಾರದಂದು ನಡೆಯಬೇಕಿದ್ದ ಐತಿಹಾಸಿಕ ವೀರ ಪುರುಷ, ಪರನಾರಿ ಸಹೋದರ, ಕನ್ನಡದ ಕಡುಗಲಿ ಎಂದು ಖ್ಯಾತನಾದ ಗಂಡುಗಲಿ ಕುಮಾರರಾಮನ ಸ್ಮರಣೆಯ ಕುಮ್ಮಟ ದುಗರ್ೋತ್ಸವವನ್ನು ನೆರೆ ಬರ ಮತ್ತು ಅತಿವೃಷ್ಟಿ ಕಾರಣಕ್ಕೆ ಸೆ. 01ಕ್ಕೆ ಮುಂದೂಡಲಾಗಿದೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ನಟ, ಮಾಜಿ ಸಂಸದ ಶಶಿಕುಮಾರ್ ಮತ್ತು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ವಾಲ್ಮೀಕಿ ಮಹಾಸ್ವಾಮಿಗಳು, ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸೇರಿದಂತೆ ಅನೇಕರು ಆಗಮಿಸುವ ಹಿನ್ನೆಲೆ ರಾಜ್ಯದ ಬಹುತೇಕ ಕಡೆಗೆ ಸಂಕಷ್ಟವಿದೆ, ಅದೇ ರೀತಿ ಜಿಲ್ಲೆಯಲ್ಲೂ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಕ್ಕೆ ಮುಂದೂಡಲಾಗಿದೆ. ಕುಮಾರರಾಮನ ಕರ್ಮ ಭೂಮಿ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಮೇಲ್ಭಾಗದಲ್ಲಿರುವ ಕುಮ್ಮಟದ ತಟದಲ್ಲಿ 2007 ರಿಂದ ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕುಮ್ಮಟ ದುಗರ್ೋತ್ಸವ ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಭಾರಿ ಅದನ್ನು ಕೊಪ್ಪಳದಲ್ಲಿಯೇ ಜಿಲ್ಲಾಮಟ್ಟದ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗಿದ್ದು, ಮುಂದೆ ಅದನ್ನು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ ಅದರ ಮೂಲಕ ಇತಿಹಾಸದತ್ತ ಬೆಳಕು ಚೆಲ್ಲುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉತ್ಸವದಲ್ಲಿ ವಿಧ್ವಾಂಸರು ತಮ್ಮ ವಿಚಾರಗಳನ್ನು ಮಂಡಿಸುವರು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ಸವದಲ್ಲಿ ಕುಮಾರರಾಮನ ಗೀತೆಗಳನ್ನು ಸಹ ಪ್ರಸ್ತುತ ಪಡಿಸುವರು, ಕುಮಾರರಾಮನ ಜಬ್ಬಲಗುಡ್ಡದಲ್ಲಿರುವ ಪಳೆಯುಳಿಕೆಗಳ ಚಿತ್ರಗಳ ಪ್ರದರ್ಶನ ಇರುತ್ತದೆ. ಕುಮಾರ ರಾಮನ ಕುರಿತು ಪುಸ್ತಕ ಬರೆದ, ಅಧ್ಯಯನ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುವದು. ಉತ್ಸವದ ಮೂಲಕ ಕುಮ್ಮಟದುರ್ಗದ ರಕ್ಷಣೆಗೆ ಹೊಸ ಆಯಾಮ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ.
ಕುಮಾರರಾಮನ ಕುರಿತು ನಾಟಕವನ್ನು ಸಹ ಪ್ರಸ್ತುತಪಡಿಸುವ ವಿಚಾರ ಮಾಡಲಾಗಿದೆ, ಹಂಪಿ ವಿವಿ, ಬಳ್ಳಾರಿ ವಿವಿ ಮತ್ತು ಬೆಳಗಾವಿ ಕಿತ್ತೂರು ಚನ್ನಮ್ಮ ವಿವಿ ಹಾಗೂ ಬಿಜಾಪುರ ಮಹಿಳಾ ವಿವಿಯಿಂದ ಪ್ರಾಧ್ಯಾಪಕರು, ಸಂಶೋಧಕರು ಆಗಮಿಸುವರು ಎಂದು ಉತ್ಸವ ಸಂಘಟಕ ಗೊಂಡಬಾಳ ತಿಳಿಸಿದ್ದಾರೆ.