ಆರೋಗ್ಯ ಸೇವೆಗಳಲ್ಲಿ ವ್ಯತ್ಯಯವಾಗದಂತೆ ಅಗತ್ಯ ಸಿದ್ಧತೆ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ 06:ಜಿಲ್ಲೆಯು ಸೇರಿದಂತೆ ರಾಜ್ಯಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಕುರಿತು ಮುಷ್ಕರ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ತಾಯಿ ಮಗುವಿನ ಆರೈಕೆ, ಲಸಿಕಾ ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಯಾವುದೇ ಸೇವೆಗಳಿಗೆ ನ್ಯೂನತೆ ಉಂಟಾಗದಂತೆ ಅಗತ್ಯ ಸಿದ್ಧತೆಯನ್ನು ಜಿಲ್ಲೆಯಾದ್ಯಂತ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಎಂಬ ಪದನಾಮದ ಅಡಿ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಆರೋಗ್ಯ ಸೇವೆಗಳ ಸೇವಾ ಪೂರೈಕೆದಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಯಾವುದೇ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಟಾನಕ್ಕೆ ತೊಡಕು ಉಂಟಾಗದಂತೆ ಪೂರಕ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿ, ಸಂಡೂರು, ಸಿರುಗುಪ್ಪ, ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕುಗಳ ತಾಲ್ಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಉಪಕೇಂದ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ, ಆರೋಗ್ಯ ನೀರೀಕ್ಷಣಾಧಿಕಾರಿ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ವರ್ಗದವರ ಮೂಲಕ ಸೇವೆಗಳನ್ನು ನೀಡಲು ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ವಿವಿಧ ತಾಲ್ಲೂಕಗಳ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿ ಆರೋಗ್ಯ ಸೇವೆ ಪೂರೈಕೆಯಲ್ಲಿ ತೊಡಕು ಉಂಟಾಗದಂತೆ ನಿಗಾವಹಿಸಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸೇವೆಗಳನ್ನು ನೀಡಲು ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವರೊಂದಿಗೆ ನಿರಂತರ ಸಂಪರ್ಕ ಹೊಂದಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.