ಭಾಗ್ಯನಗದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ
ಕೊಪ್ಪಳ23 : ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಭಾರತೀಯ ವಿಜ್ಞಾನ ಸಂಸ್ಥೆ ಆವರಣ, ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತಿ, ಕೊಪ್ಪಳ ರವರ ಸಹಯೋಗದೊಂದಿಗೆ ಸೋಮವಾರ ಭಾಗ್ಯನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಪ್ರಯುಕ್ತ ಗಣಿತ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಂಜುನಾಥ ಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಗಣಿತ ಕಲಿಕೆಯಿಂದ ಮಕ್ಕಳು ವೈಜ್ಞಾನಿಕವಾಗಿ ಬೆಳೆಯಲು ಪ್ರಮುಖ ಪತ್ರವಹಿಸುತ್ತದೆ. ಎಂದು ತಿಳಿಸಿದರು.ಕಾರ್ಯಕ್ರಮದ ನಿಮಿತ್ತ ಸಂಪನ್ಮೂಲ ವ್ಯಕ್ತಿಗಳಾಗಿ ಗಿಣಿಗೇರದ ಮುಖ್ಯ ಶಿಕ್ಷಕರು ಸದಾನಂದ ಕುಮಾರ ಮತ್ತು ಭಾನಾಪುರ್ ಗಣಿತ ಶಿಕ್ಷಕ ಕಾಶಿ ವಿಶ್ವನಾಥ್ ಅವರು ಶಾಲಾ ಮಕ್ಕಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯಂತ ಸುಲಭ ಹಾಗೂ ಸರಳ ವಿಧಾನದಲ್ಲಿ ಭೋದನೆ ಮಾಡಿದರು.
ಈ ಸಂದರ್ಭದಲ್ಲಿ ಡಯಟ್‌ನ ಉಪನ್ಯಾಸಕರು ಹಾಗೂ ಶಾಲಾ ಉಪ ಪ್ರಾಂಶುಪಾಲರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಜಿಲ್ಲಾ ಎನ್.ಆರ್.ಡಿ.ಎಮ್.ಎಸ್. ಕೇಂದ್ರದ ಗುರುಸ್ವಾಮಿ ಪಿ ಸೇರಿದಂತೆ ಮತ್ತಿತರರಿದ್ದರು. ಶಿಕ್ಷಕ ಮಂಜುನಾಥ ತಿಮ್ಮಕ್ಕನವರ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿರೇಸಿಂದೋಗಿಯಲ್ಲಿ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮಕೊಪ್ಪಳ 23 : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಿರೇಸಿಂದೋಗಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ ಎ.ಪಿ.ಜಿ ಅಬ್ದುಲ್ ಕಲಾಂ, ವಸತಿ ಪಿಯುಸಿ ಕಾಲೇಜಿನಲ್ಲಿ ಇತ್ತೀಚೆಗೆ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಕ್ಷಯರೋಗ ಮುಕ್ತ ಅಭಿಯಾನದ ಕಾರ್ಯಕ್ರಮ ಡಿಸೆಂಬರ್ 7 ರಿಂದ 2025ರ ಮಾರ್ಚ್ 23ರ ವರೆಗೆ ಜಿಲ್ಲೆಯ್ಯಾದಂತ “ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೀವ್ರತರವಾಗಿ ಕ್ಷಯರೋಗವನ್ನು ಪತ್ಯೆ ಹಚ್ಚುವುದು, ಕ್ಷಯರೋಗದ ಮರಣದ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ಹೊಸ ಕ್ಷಯರೋಗಿಗಳು ಉಲ್ಬಣವಾಗದಂತೆ ನೋಡಿಕೊಳ್ಳುವುದು ಈ ಅಭಿಯಾನದ ಗುರಿ ಮತ್ತು ಉದ್ದೇಶವಾಗಿದೆ. ಕ್ಷಯ ಟಿ.ಬಿ ರೋಗವೂ ಸೋಂಕಿತ ರೋಗಿಯು ಕೆಮ್ಮುವುದರ ಮೂಲಕ ಹಾಗೂ ಶೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಪ್ರಸಾರವಾಗುತ್ತದೆ. ಒಬ್ಬ ಕ್ಷಯರೋಗಿಯು ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಒಂದು ವರ್ಷಕ್ಕೆ 10-15 ಜನರಿಗೆ ಪ್ರಸಾರ ಮಾಡುತ್ತಾನೆ. ಕಾರಣ ಯಾರಿಗಾದರೂ ಸತತ ಎರಡು ವಾರಗಳಿಂದ ಕೆಮ್ಮು ಕಾಣಿಸಿಕೊಂಡರೆ, ಕೆಮ್ಮಿನಲ್ಲಿ ಕಫ ಬಂದರೆ, ಕಫದಲ್ಲಿ ರಕ್ತ ಬಂದರೆ, ತೂಕ ಕಡಿಮೆಯಾದರೆ, ಸಾಯಾಂಕಲ ವೇಳೆ ಜ್ವರ ಬರುವ ಲಕ್ಷಣಗಳು ಇದ್ದರೆ ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಂಡು, ರೋಗ ಕಂಡು ಬಂದರೆ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಯಾರೂ ಕೂಡ ಟಿ.ಬಿ ರೋಗದ ಬಗ್ಗೆ ನಿರ್ಲಕ್ಷ ಮಾಡಬಾರದು. ಕ್ಷಯರೋಗಿಗಳು ಎಲ್ಲಂದರಲ್ಲಿ ಊಗಳಬಾರದು, ಕೆಮ್ಮುವಾಗ ಮತ್ತು ಶೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು. ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ, ಆರೋಗ್ಯದ ಯಾವುದೇ ಸಮಸ್ಯೆವಿದ್ದರೆ, ಅವರ ಹತ್ತಿರ ಚರ್ಚಿಸಿ, ಸಲಹೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕ್ಷಯರೋಗ(ಟಿ.ಬಿ) ನಿರ್ಮೂಲನೆ ಕುರಿತು, ಗ್ರಾಮಗಳಲ್ಲಿ ಕ್ಷಯರೋಗಿಗಳನ್ನು ಪತ್ಯೆ ಹಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ, ಅವರನ್ನು ಗುಣಮುಖರನ್ನಾಗಿ ಮಾಡಬೇಕಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸಹವ್ಯಾಧಿಗಳಿಗೆ ಈ ಕ್ಷಯರೋಗಕ್ಕೆ ಬೇಗನೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮನುಷ್ಯನ ಉಗುರು ಹಾಗೂ ಕೂದಲು ಬಿಟ್ಟು ದೇಹದ ಯಾವುದೇ ಭಾಗಕ್ಕಾದರೂ ಕ್ಷಯರೋಗ(ಟಿ.ಬಿ) ಬರಬಹುದು. ಆದ್ದರಿಂದ ಕ್ಷಯರೋಗದ ಲಕ್ಷಣ ಉಳ್ಳವರು ಖಾಯಿಲೆಯ ಬಗ್ಗೆ ಅಸಡ್ಡೆ ತೊರದೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳಬೇಕು. 2025ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು ಸಹಕರಿಸುವಂತೆ ತಿಳಿಸಿದರು. ಪೌಷ್ಠಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಅಭಿಯಾನದಡಿಯಲ್ಲಿ ಪೌಷ್ಠಿಕ ಆಹಾರ ಸೇವಿಸಲು ಪ್ರತಿ ರೋಗಿಗೆ ಮಾಸಿಕ ರೂ.1000 ಗಳನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ರೋಗಿಯ ಮನೆ ಬೇಟಿ ನೀಡಿ, ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಸದರಿ ಖಾಯಿಲೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ, “ಟಿ.ಬಿ ಸೋಲಿಸಿ-ದೇಶ ಗೆಲ್ಲಿಸಿ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಆರ್.ಕೆ.ಎಸ್.ಕೆ ಆಪ್ತಸಮಾಲೋಚಕಿ ಕಲ್ಪನಾ ಅವರು ಮಾತನಾಡಿ, ಮುಟ್ಟಿನ ನೈರ್ಮಲ್ಯತೆ, ಹದಿ-ಹರೆಯದವರ ಆರೋಗ್ಯದ ಮಹತ್ವ, ರಕ್ತಹೀನತೆ, ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವ ವಿಷಯ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಿಜಯಕುಮಾರ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ ಜೊತೆಗೆ ವಿವಿಧ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಬಗ್ಗೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್‌ಗಳಲ್ಲಿ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಹ-ಉಪನ್ಯಾಸಕರಾದ ವಿರೇಶ ಎಂ ಹಾಗೂ ವಿರೇಶ, ಆರೋಗ್ಯ ನೀರೀಕ್ಷಣಾಧಿಕಾರಿ ಶಿವರಾಜ, ಆಶಾ ಕಾರ್ಯಾಕರ್ತೆ ಅಂಬಿಕಾ, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.