ಲೋಕದರ್ಶನ ವರದಿ
ಬೆಳಗಾವಿ 18: ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ, ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ಸಚಿವಾಲಯ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕೆಎಲ್ಇ ವಿಶ್ವವಿದ್ಯಾಲಯದ ಬೆಂಗಳೂರಿನ ಔಷಧೀಯ ಮಹಾವಿದ್ಯಾಲಯದ ವತಿಯಂದ ವಿಶ್ವವಿದ್ಯಾಲಯ ಮಟ್ಟದ ಏಳು ದಿನಗಳ ಸ್ವಚ್ಛತಾ ಶಿಬಿರವನ್ನು ದಿ. 7ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿತ್ತು.
ವಿವಿಧ ವಿಶ್ವವಿದ್ಯಾಲಯಗಳ 100 ಎನ್ಎಸ್ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದ ಈ ಶಿಬಿರವನ್ನು ಬೆಂಗಳೂರಿನ ಕೆಎಲ್ಇ ಔಷಧೀಯ ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಮಮತಾ ಎ. ಅಚ್ಚುಕಟ್ಟಾಗಿ ನಿರ್ವಹಿಸಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್ ಸಚ್ಚಿದಾನಂದ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಬಿರವನ್ನು ಉದ್ಘಾಟಿಸಿದರು. ಎನ್ಎಸ್ಎಸ್ ನ ಅಂತರಾಷ್ಟ್ರೀಯ ಯುವಪ್ರತಿನಿಧಿ ಎಸ್. ಶ್ವೇತಾ ವಿಶೇಷ ಅಹ್ವಾನಿತರಾಗಿದ್ದರು. ಕೆಎಲ್ಇ ಔಷಧೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಮನ್ದಂಗ್ ಅಧ್ಯಕ್ಷತೆ ವಹಿಸಿದ್ದರು. ಸ್ವಚ್ಚತಾ ಕಾರ್ಯದ ಮೂಲಕ ಡಾ.ಎಸ್. ಸಚ್ಚಿದಾನಂದ ಶಿಬಿರಕ್ಕೆ ಚಾಲನೆ ನೀಡಿದರು. ಮಹಾವಿದ್ಯಾಲಯದ ಆವರಣದಲ್ಲಿ ಸ್ವಚ್ಚತಾ ಕಾರ್ಯಗಳ ಮೂಲಕ ಎನ್ಎಸ್ಎಸ್ ಸ್ವಯಂ ಸೇವಕರು ಜನಜಾಗೃತಿ ರ್ಯಾಲಿ ನಡೆಸಿದರು.
ಎಳು ದಿನಗಳ ಶಿಬಿರದಲ್ಲಿ ಪ್ರತಿದಿನ ಜಿಲ್ಲೆಯ ವಿವಿದಡೆಗಳಲ್ಲಿ ಸ್ವಚ್ಚತಾ ಕಾರ್ಯದೊಂದಿಗೆ ಜನಜಾಗೃತಿ ರ್ಯಾಲಿ, ಪ್ಲಾಸ್ಟಿಕ್ ಮುಕ್ತ ಪರಿಸರ, ತ್ಯಾಜ್ಯ ನಿರ್ವಹಣಿ ಜಾಗೃತಿ, ವಿವಿಧ ಚಟುವಟಿಕೆಗಳು ನೆರವೇರಿದವು. ಸಮಾರೋಪ ಸಮಾರಂಭದಲ್ಲಿ ಕೆ ಸಿ ಜೆನರಲ್ ಆಸ್ಪತ್ರೆಯ ಅಧೀಕ್ಷಕ ಡಾ. ವೆಂಕಟಯ್ಯ ಬಿ.ಆರ್,ಕಾಹೇರ್ ಬೆಳಗಾವಿಯ ಎನ್ಎಸ್ಎಸ್ ಸಂಯೋಜಕಿ ಡಾ.ಅಶ್ವಿನಿ ನರಸಣ್ಣವರ ಅತಿಥಿಗಳಾಗಿ ಪಾಲ್ಗೊಂಡರು.