ಸಂಗೀತ ಮನಸ್ಸನ್ನು ಪುಳಕಿತಗೊಳಿಸುವ ಸಾಧನ...

Music is a tool to enthuse the mind...

ಸಂಗೀತ ಮನಸ್ಸನ್ನು ಪುಳಕಿತಗೊಳಿಸುವ ಸಾಧನ... 

ವಿಜಯಪುರ 04 : ಇಂದು ಮಾನವ ಜೀವನದಲ್ಲಿ ಏನೆಲ್ಲವನ್ನು ಗಳಿಸಬಲ್ಲ, ಸಂಪಾದಿಸಬಲ್ಲ. ಆದರೆ ಆತನ ಜೀವನದಲ್ಲಿ ಒಂದಿಷ್ಟು ಸುಖ-ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ನಗು ಸರ್ವರ ರೋಗಗಳಿಗೆ ಮದ್ದು. ಮನುಷ್ಯನ ಮೊಗದಲ್ಲಿ ಕೊಂಚ ನಗು, ಸಂತೋಷ ಮತ್ತು ಮನಸ್ಸನ್ನು ಪುಳಕಿತಗೊಳಿಸಲು ಹಾಸ್ಯ ಮತ್ತು ಸಂಗೀತ ಆಲಿಸುವುದು ಅವಶ್ಯಕ. ಅದಕ್ಕಾಗಿ ಧಾರ್ಮಿಕ-ಸಾಮಾಜಿಕ ಮತ್ತು ಇಂತಹ ಜಾತ್ರಾಮಹೋತ್ಸವಗಳಲ್ಲಿ ಜನರಿಗೆ ಹಾಸ್ಯ, ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಮಹತ್ವದ ಕಾರ್ಯವಾಗಿದೆ. ನಾವು ಬದುಕು-ಸಂಸಾರದ ಜಂಜಾಟದಿಂದ ಸ್ವಲ್ಪ ರಿಲ್ಯಾಕ್ಸ್‌ ಪಡೆಯಲು ದೇವರ ನಾಮಸ್ಮರಣೆ, ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಹೊಂದುವುದು ಅಗತ್ಯವಾಗಿದೆ. ಅದರ ಜೊತೆಗೆ ಸಮೂಹ ಮಾಧ್ಯಮ, ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ದೇಶೀಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಸಕ್ರೀಯವಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗುತ್ತಾ, ನಮ್ಮ ಮುಂದಿನ ಯುವ ಪೀಳಿಗೆ ಉಳಿಸಿ-ಬೆಳೆಸಿಕೊಂಡು ಹೋಗುವಂತೆ ಪ್ರೇರೇಪಿಸಬೇಕಾಗಿದೆ. ಅಳಿವಿನ ಅಂಚಿನಲ್ಲಿರುವ ನಮ್ಮ ಸಾಂಪ್ರದಾಯಿಕ ಸಂಗೀತ ಕಲೆಯನ್ನು ಮುಂದಿನ ಜನಾಂಗಕ್ಕೆ ಉಳಿಸಿ-ಬೆಳೆಸಬೇಕೆಂದು ಮುಖ್ಯ ಅತಿಥಿಗಳಾದ ಎಸ್‌.ಎಸ್‌.ಸಾವಳಗಿ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್‌.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಹನುಮಾನ ಮಂದಿರದ 5 ನೇಯ ವರ್ಷದ ಜಾತ್ರಾಮಹೋತ್ಷವದಲ್ಲಿ ದಿನಾಂಕ: 02-02-2025 ರಂದು ಸಂಜೆ ಜರುಗಿದ ಲೈವ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ಇದೇ ಸಂದರ್ಭದಲ್ಲಿ ಸಂಗೀತ ಮನೆ ಯೂ ಟೂಬ್ ಚಾನೆಲ್ ಖ್ಯಾತಿಯ ಹುಬ್ಬಳ್ಳಿಯ ಸೌಮ್ಯ ಮಂಜುನಾಥ ಹಾಗೂ ಮಂಜುನಾಥ ಹೊಸವಾಳ ತಂಡ ಕಾರ್ಯಕ್ರಮದಲ್ಲಿ ಹಿಂದೂಸ್ಥಾನಿ ಶಾಸ್ತ್ರೀ ಸಂಗೀತ, ನಿಜಗುಣ ಶಿವಯೋಗಿಗಳು, ಕನಕದಾಸ, ಪುರಂದರ ದಾಸ, ಶಿಶುನಾಳ ಷರೀಪರ ತತ್ವಪದಗಳು, ಜೀವನ-ಮೌಲ್ಯ, ದೈವ ಭಕ್ತಿ-ಭಾವ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಳಿಸಿದರು.  

ಕಾರ್ಯಕ್ರಮದಲ್ಲಿ ಶ್ರೀ ಸಂಗಣ್ಣ ತೆನಿಹಳ್ಳಿ, ಭೀಮರಾಯ ಬಿರಾದಾರ, ಎಸ್‌.ಜಿ.ನಿಂಗನಗೌಡ್ರ, ಎಸ್‌.ಬಿ.ಮಾಳಿ,  ಡಾ. ಆನಂದ ದೈಯಗೊಂಡ, ರಮೇಶ ಕೋಷ್ಠಿ, ಗಂಗಾಧರ ಚಾಬುಕಸವಾರ, ಪ್ರಶಾಂತ ವೈದ್ಯ, ಶ್ರೀಧರ ತಾಟೆ, ಎಸ್‌.ಎಸ್‌.ಓತಿಹಾಳ ಇನ್ನಿತರರು ಸಹ ಉಪಸ್ಥಿತರಿದ್ದರು.                  ಪ್ರೊ. ಎಂ.ಎಸ್‌.ಖೊದ್ನಾಪೂರ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ ದೇಶಪಾಂಡೆ ವಂದಿಸಿದರು. ಸುತ್ತಮುತ್ತಲಿನ ಬಡಾವಣೆಯ ನೂರಾರು ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತದ ರಸದೌತಣ ಸವಿದರು.