ವಸ್ತು ಸಂಗ್ರಹಾಲಯಗಳು ಅಕ್ಷರ ಮತ್ತು ಅನಕ್ಷರಸ್ಥರ ಜ್ಞಾನಕೋಶಗಳು

Museums are encyclopedias of literate and illiterate people

ವಸ್ತು ಸಂಗ್ರಹಾಲಯಗಳು ಅಕ್ಷರ ಮತ್ತು ಅನಕ್ಷರಸ್ಥರ ಜ್ಞಾನಕೋಶಗಳು 

ಗದಗ 08 : ಜಿಲ್ಲೆಯ ಪ್ರದೇಶದಲ್ಲಿ ಇತಿಹಾಸಪೂರ್ವ ಕಾಲಾವಧಿಯ ವಿವಿಧ ಮಾನವ ಸಂಸ್ಕೃತಿಗಳ ಪ್ರಾಚ್ಯಾವಶೇಷಗಳು ಹಾಗೂ ಇತಿಹಾಸ ಕಾಲಾವಧಿಯ ಶಾತವಾಹನರು ಆದಿಯಾಗಿ ವಸಾಹತುಶಾಹಿ ಕಾಲದವರೆಗಿನ ಅಪರೂಪದ ದಾಖಲೆಗಳು ಲಭ್ಯವಾಗಿದ್ದು, ಇವುಗಳನ್ನು ವ್ಯವಸ್ಥಿತವಾಗಿ ಒಂದೆಡೆಗೆ ಸಂಗ್ರಹಿಸಬೇಕೆಂದು ಸ್ಥಳೀಯ ಸಂಶೋಧಕರು ಮತ್ತು ಅಧ್ಯಯನಾಸಕ್ತರ ಬಹುದಿನಗಳ ಬೇಡಿಕೆಯಾಗಿದ್ದಿತು. ಈ ಬೇಡಿಕೆಗನುಗುಣವಾಗಿ ಕರ್ನಾಟಕ ಸರ್ಕಾರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು 1998ರಲ್ಲಿ ಗದಗ ನಗರದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಪ್ರಾರಂಭಿಸಿದ್ದು, ಇದರಲ್ಲಿ ಸಂಗ್ರಹಿಸಿರುವ ಇತಿಹಾಸಪೂರ್ವ ಮತ್ತು ಇತಿಹಾಸ ಆರಂಭಕಾಲದ ಪ್ರಾಚ್ಯಾವಶೇಷಗಳು, ವಿವಿಧ ಅರಸು ಮನೆತನಗಳ ಶಾಸನಗಳು, ಜೈನ, ಶೈವ, ವೈಷ್ಣವ, ಶಾಕ್ತ, ಗಾಣಪತ್ಯ ಮುಂತಾದ ಮತಪಂಥಗಳ ಶಿಲ್ಪಗಳು, ವೀರಗಲ್ಲುಗಳು, ಮಹಾಸತಿಗಲ್ಲುಗಳು, ನಿಷಿಧಿಗಲ್ಲುಗಳು, ಪ್ರಾಚೀನ ದೇವಾಲಯಗಳು ಮತ್ತು ಶಿಲ್ಪಗಳ ವರ್ಣಚಿತ್ರಗಳು ಈ ಜಿಲ್ಲೆಯ ತತ್ಕಾಲೀನ ಇತಿಹಾಸ ಮತ್ತು ಸಂಸ್ಕೃತಿಯ ಅಪರೂಪದ ದಾಖಲೆಗಳಾಗಿವೆ ಎಂದು ಇತಿಹಾಸ ಸಂಶೋಧಕ ಮತ್ತು ಪ್ರವಾಸಿ ಮಾರ್ಗದರ್ಶಿ ಅ.ದ. ಕಟ್ಟಿಮನಿ ಹೇಳಿದರು. ಹುಲಕೋಟಿಯ  ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ 1ನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ‘ಗದಗ ನಗರದ ಪ್ರಾಚ್ಯವಸ್ತು ಸಂಗ್ರಹಾಲಯ’ ಕುರಿತು ಅಧ್ಯಯನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಉಪನ್ಯಾಸ ಮಾಡುತ್ತ, ಈ ಸಂಗ್ರಹಾಲಯದಲ್ಲಿ ಸಂಗ್ರಹಿತ ಪುರಾತತ್ವ ಅವಶೇಷಗಳು ಈ ಪ್ರದೇಶದ ಪೂರ್ವಜರ ಜೀವನ ಮೌಲ್ಯಗಳ ಪುರಾವೆಗಳಾಗಿದ್ದು, ಇವುಗಳ ವ್ಯವಸ್ಥಿತ ದಾಖಲೀಕರಣ ಮತ್ತು ಸಾಂಸ್ಕೃತಿಕ ಸಂಶೋಧನ ಅಧ್ಯಯನ ನಡೆಸುವುದು ಅವಶ್ಯವಿದೆ ಎಂದು ಹೇಳಿದರು. 

ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಅಪ್ಪಣ್ಣ ಹಂಜೆ ಅವರು ವಿದ್ಯಾರ್ಥಿಗಳಿಗೆ ವಸ್ತು ಸಂಗ್ರಹಾಲಯಗಳ ಪ್ರಾಚೀನತೆ, ಪ್ರಕಾರಗಳು, ಪ್ರಾಮುಖ್ಯತೆ ಕುರಿತು ವಿವರಿಸುತ್ತ, ವಸ್ತುಸಂಗ್ರಹಾಲಯಗಳು ಅಕ್ಷರ ಮತ್ತು ಅನಕ್ಷರಸ್ಥರ ಜ್ಞಾನಕೋಶಗಳಾಗಿದ್ದು, ಇವುಗಳ ವಿಕ್ಷಣೆಯಿಂದ ಪ್ರಾಚೀನ ಧಾರ್ಮಿಕ, ಸಾಮಾಜಿಕ ವ್ಯವಸ್ಥೆಯ ಜೊತೆಗೆ ಪೂರ್ವಜರ ಬದುಕಿನ ಜೀವನ ಮೌಲ್ಯಗಳನ್ನು ಅರಿಯಬಹುದಾಗಿದೆ ಎಂದು ಹೇಳಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ರೋಹಿಣಿ ರಾಚನ್ನವರ ಮತ್ತು ಬಸವಂತೆಪ್ಪ ದೊಡ್ಡಮನಿ ಅವರು ವಿದ್ಯಾರ್ಥಿಗಳಿಗೆ ತಮ್ಮ ಗ್ರಾಮದಲ್ಲಿ ಅನಾಥವಾಗಿ ಹರಡಿಕೊಂಡಿರುವ ಪ್ರಾಚ್ಯಾವಶೇಷಗಳ ಮಹತ್ವದ ಕುರಿತು ಮಾಹಿತಿ ಸಂಗ್ರಹಿಸಿ ಜನರಲ್ಲಿ ಐತಿಹಾಸಿಕ ಪರಂಪರೆಯನ್ನು ಉಳಿಸಿಡುವ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.