ಬುದ್ಧಿವಾದ ಹೇಳಿದ್ದಕ್ಕೆ ಕೊಲೆ: ಅಪರಾಧಿ ಸುರೇಶ್ ಶಿಂಧೆಗೆ ಜೀವಾವಧಿ ಶಿಕ್ಷೆ
ಕಾರವಾರ 06: ಪತ್ನಿಯನ್ನು ಸರಿಯಾಗಿ ನೋಡಿಕೊ ಎಂದು ಬುದ್ಧಿವಾದ ಹೇಳಿದ್ದಕ್ಕೆ ಮಾವನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿ, ಅತ್ತೆಯನ್ನು ಕೊಲೆ ಮಾಡಿದ್ದ ಸುರೇಶ್ ದಾದಾರಾವ್ ಶಿಂಧೆಗೆ ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಕಿಣಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ು ನೀಡಿದ್ದಾರೆ. ಅಲ್ಲದೆ 36 ಸಾವಿರ ದಂಡ ಹಾಗೂ ರೂ.50 ಸಾವಿರವನ್ನು ಮೃತಳ ಅವಲಂಬಿತರಿಗೆ ನೀಡುವಂತೆ ಆದೇಶ ನೀಡಿದ್ದಾರೆ.
ಪ್ರಕರಣ ಹಿನ್ನೆಲೆ: ಮುಂಡಗೋಡ ಮೈನಳ್ಳಿಯಲ್ಲಿ 2016 ಡಿಸೆಂಬರ್ 15ರಂದು ಮೈನಳ್ಳಿಯ ಮನೆಯಲ್ಲಿ ಅಳಿಯ ಸುರೇಶ್ ಶಿಂಧೆಗೆ, ಮಾವ ಭೈರು ಪಿರಾಜೇ ಸಾಳುಂಕೆ ಬುದ್ಧಿವಾದ ಹೇಳಿದ್ದರು. ಆಗ ನನ್ನ ಮತ್ತು ನನ್ನ ಹೆಂಡತಿ ಜಗಳದಲ್ಲಿ ಮಧ್ಯೆ ಬರಬೇಡ ಎಂದು ಅವಾಚ್ಯಪದಗಳಿಂದ ಬೈದು ಸುತ್ತಿಗೆ ಯಿಂದ ಹಲ್ಲೆ ಮಾಡಿದ್ದ. ಜಗಳ ಬಿಡಿಸಲು ಬಂದ ಭೈರು ಪತ್ನಿ ತುಳಸ ಬಾಯಿಗೆ ಸಲಿಕೆಯಿಂದ ಹಲ್ಲೆ ಮಾಡಿದ್ದ. ತಲೆಗೆ ಪೆಟ್ಟು ಬಿದ್ದು ತೀವ್ರಗಾಯಗೊಂಡಿದ್ದ ತುಳಜಾ ಬಾಯಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ 2017 ಜನವರಿ 3ರಂದು ಸಾವನ್ನಪ್ಪಿದರು. ಕೊಲೆ ಪ್ರಕರಣ ದಾಖಲಿಸಿದ್ದ ಸಿಪಿಐ ಕಿರಣ ಕುಮಾರ್ ನಾಯಕ ಹಾಗೂ ಎಚ್ ಸಿ.ಕರಿಬಸಪ್ಪ ಇಂಗಳೂಸುರ ತನಿಖೆ ಮಾಡಿ, ಸಾಕ್ಷ್ಯ ಸಹಿತ ಕೋರ್ಟ್‌ಗೆ ಚಾರ್ಜ ಶೀಟ್ ಸಲ್ಲಿಸಿದರು.
ಸುರೇಶ್ ಪತ್ನಿ ಪಾರ್ವತಿ ಸಹ ಸಾಕ್ಷ್ಯ ನುಡಿದಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಸುರೇಶ್ ದಾದಾರಾವ್ ಶಿಂಧೆಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ ಅಪರಾಧಿಗೆ ಜೀವಾವಧಿ ವಿಧಿಸಬೇಕೆಂದು ಸಮರ್ಥವಾಗಿ ವಾದಿ ಮಂಡಿಸಿದ್ದರು.