ವಿದ್ಯಾರ್ಥಿ ವಸತಿ ನಿಲಯಗಳಲ್ಲಿನ ಕುಂದುಕೊರತೆಗಳ ಮೇಲ್ವಿಚಾರಣೆ ಮಾಡಿ: ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ
ಬೆಳಗಾವಿ ಜ 17 : ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯ ಎಲ್ಲ ತಾಲೂಕುಗಳ ವಸತಿ ನಿಲಯಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ನ್ಯೂನತೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ವರದಿ ನೀಡುವುದು. ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನೀಡುವ ಪೌಷ್ಟೀಕ ಆಹಾರದ ಕುರಿತು ಮೇಲ್ವಿಚಾರಣೆ ಮಾಡಿ, ವಸತಿ ನಿಲಯಗಳು ಹಳೆಯ ಕಟ್ಟಡಗಳಿದ್ದಲ್ಲಿಅವುಗಳನ್ನು ಪರೀಶೀಲನೆ ಮಾಡುವುದು ಅದರ ಜೊತೆಗೆ ವಸತಿ ನಿಲಯಗಳ ಕಟ್ಟಡಗಳು ಸರಕಾರದ ಮಾರ್ಗಸೂಚಿ ಪ್ರಕಾರ ನಿರ್ಮಾಣವಾಗಿರುವ ಕುರಿತು ವರದಿ ಸಲ್ಲಿಸುವುದು. ವಸತಿ ನಿಲಯಗಳಲ್ಲಿನ ಗ್ರಂಥಾಲಯ, ಗಣಕಯಂತ್ರ ಮತ್ತು ಕೌಶಲ್ಯ ಪ್ರಯೋಗಾಲಯಗಳ ಮೇಲೆ ಹೆಚ್ಚಿನ ಒತ್ತು ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಸೂಕ್ತ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಸರಕಾರಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯಗಳ ನಿರ್ವಹಣೆ ಕುರಿತು ನಡೆದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ನಿಲಯಗಳಲ್ಲಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ದಾಖಲಾಗಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ ಕಚೇರಿಯ ಅನುಮತಿಯ ಮೇರಗೆ ಬಾಡಿಗೆ ಕಟ್ಟಡ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾನ್ಯರು ಸೂಚನೆ ನೀಡಿದರು. ಅದೇ ರೀತಿ ವಸತಿ ನಿಲಯಗಳಲ್ಲಿನ ಶೌಚಾಲಯ ದುಸ್ಥಿತಿ ಬಗ್ಗೆ, ಬೀಸಿ ನೀರಿನ ವ್ಯವಸ್ಥೆ, ಸೋಲಾರ್ ಹೀಟರ ಸರಿಯಾದ ನಿರ್ವಹಣೆ, ಮೇಲ್ವಿಚಾರಕರ ಕೊರತೆ, ಸ್ವಚ್ಛತೆ ನಿರ್ವಹಣೆ ಕುರಿತು ಪರೀಶೀಲನೆ ಮಾಡಿ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಶಿಂಧೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕ ರವಿ ಬಂಗಾರ್ಪನ್ನವರ ಜಿಪಂ ಬೆಳಗಾವಿ, ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕ ಹರ್ಷಾ ಕೆ.ಎಸ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ್ ಕುರಿಹುಲಿ, ಜಿಲ್ಲಾಧಿಕಾರಿಗಳು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಎಫ್.ಯು ಪೂಜೇರ, ಸಹಾಯಕ ಕಾರ್ಯದರ್ಶಿ ಜಯಶ್ರೀ ನಂದೇಣ್ಣವರ ಜಿಪಂ ಬೆಳಗಾವಿ, ಕಚೇರಿ ವ್ಯವಸ್ಥಾಪಕರು ಶಿಲ್ಪಾ ಚೌಗಲಾ ಹಾಗೂ ಜಿಲ್ಲಾ ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು.