ಶಿವಮೊಗ್ಗ, 20: ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ನಾಯಕರಿಗೆ ತಕ್ಕ ಪಾಠ ಕಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೇಡಿನ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಮುನ್ನವೇ ವಿಷಯ ಗೊತ್ತಿತ್ತು ಮತ್ತು ಐಟಿ ದಾಳಿ ಬಗ್ಗೆಯೂ ಮುಂಚಿತವಾಗಿ ಮಾಹಿತಿ ಇತ್ತು ಎಂದು ಬಹಿರಂಗವಾಗಿ ಹೇಳುವ ಮೂಲಕ ಅವರು ಅಧಿಕಾರ ಗೌಪ್ಯತಾ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಶಾಸಕ ಕುಮಾರ್ ಬಂಗಾರಪ್ಪ :
ರಾಜ್ಯದಿಂದ ಜೆಡಿಎಸ್ ಪಕ್ಷವನ್ನು ಹೊರಹಾಕಲು ಮತದಾರರಿಗೆ ಸುವರ್ಣ ಅವಕಾಶ ದೊರೆತಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ತಮ್ಮ ಭಾಷಣದ ಉದ್ದಕ್ಕೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವರು ಹರಿಹಾಯ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಿ, ಕಾಂಗ್ರೆಸ್ ಶವ ಪೆಟ್ಟಿಗೆಗೆ ಕೊನೆ ಮೊಳೆ ಜಡಿದಿದ್ದಾರೆ. ದೇಶದಲ್ಲಿ ಎರಡು ಪಕ್ಷಗಳ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. ಸಣ್ಣಪುಟ್ಟ ಪಕ್ಷಗಳಿಗೆ ಮಹತ್ವ ಇಲ್ಲದಂತಾಗಿದೆ.
ದೇಶ ಇಂತಹ ಗೊಂದಲಗಳಿಂದ ಮುಕ್ತವಾಗಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಪ್ರಚಾರ
ಈ ನಡುವೆ ಶಿವಮೊಗ್ಗ ಜಿಲ್ಲೆಯಾದ್ಯಂತ ಇಂದು ಬಿಜೆಪಿ ಅಬ್ಬರದ ಪ್ರಚಾರ ನಡೆಸಿದೆ. ಭದ್ರಾವತಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ಮಾಡಿ ಹವಾ ಎಬ್ಬಿಸಿದ್ದಾರೆ. ಇತ್ತ ಕಡೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಪ್ರಚಾರ ಸಭೆಗೆ ಮಾಜಿ ಕೇಂದ್ರ ಸಚಿವ ಎಸ್.ಎಮ್.ಕೃಷ್ಣ ಚಾಲನೆ ನೀಡಿದ್ದು ಸಾವಿರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದಾರೆ.
ತೀರ್ಥಹಳ್ಳಿ ಸಭೆಯಲ್ಲಿ ಶಾಸಕರಾದ ಕುಮಾರ್ ಬಂಗಾರಪ್ಪ, ಅರಗ ಜ್ಞಾನೇಂದ್ರ, ನಂಜನಗೂಡು ಶಾಸಕ ಹರ್ಷವರ್ಧನ್, ಮಾಜಿ ಶಾಸಕ ವಿಶ್ವನಾಥ್ ಮೊದಲಾದವರು ಭಾಗಿಯಾಗಿದ್ದರು.