ಸಿ ಟಿ ರವಿಯವರು ಅವಾಚ್ಯ ಶಬ್ದ ಬಳಸಿಲ್ಲವೆಂದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Minister Lakshmi Hebbalkar statement against CT Ravi

ಬೆಂಗಳೂರು 24: ಬಿಜೆಪಿ ನಾಯಕ ಸಿ ಟಿ ರವಿಯವರು ನನ್ನ ಬಗ್ಗೆ ಅವಾಚ್ಯ ಶಬ್ದ ಬಳಸಿಲ್ಲವೆಂದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ನೋಡೋಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಸಂದರ್ಶನ ವೇಳೆ ಮಾತನಾಡಿದ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ರಾಮಾಯಣ, ಮಹಾಭಾರತ ಆಗಿದ್ದು, ಮಹಿಳೆಯನ್ನು ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ. ಇಲ್ಲಿಯೂ ಆಗುತ್ತೆ. ಸಿ.ಟಿ ರವಿ ಅವರು ಆ ರೀತಿ ಹೇಳಿಲ್ಲ ಅನ್ನೋದಾದ್ರೆ, ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ. ಆಣೆ ಮಾಡಲಿಕ್ಕೆ ನಾನೂ ನನ್ನ ಕುಟುಂಬ ಸಮೇತವಾಗಿ ಬರ್ತೀನಿ ಎಂದರು.

ಡಿ.19ರಂದು ಬೆಳಗಾವಿ ಸುವರ್ಣಸೌಧದ ಪರಿಷತ್‌ ಕಲಾಪದಲ್ಲಿ ಎಂಎಲ್‌ಸಿ ಸಿ.ಟಿ ರವಿ ಅವರು ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆ ಎಂದು ನಾನು ನಾಟಕ ಮಾಡೋದಕ್ಕೆ ಆಗುತ್ತಾ? ಸದನದಲ್ಲಿ ನಿಂತು ಸುಳ್ಳು ಆರೋಪ ಮಾಡೋದಕ್ಕೆ ಆಗುತ್ತಾ? ಸುಳ್ಳು ಹೇಳೋದಕ್ಕೆ ನನಗೇನು ಹುಚ್ಚಾ? ನಾಟಕವಾಡಿ ರಾಜಕಾರಣದಲ್ಲಿ ನಾನು ಏನಾದ್ರೂ ಗಳಿಸೋದು ಇದ್ಯಾ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕೇಳಿದರು.

ʻಫ್ರೆಟ್ಟ್ರೇಟ್‌ʼ ಎಂದು ಉಚ್ಚಾರ ಮಾಡಿರುವುದಾಗಿ ಸಿ.ಟಿ ರವಿ ಹೇಳ್ತಾರಲ್ಲಾ ಎಂಬ ಪ್ರಶ್ನೆಗೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಫ್ರೆಸ್ಟ್ರೇಟ್‌ ಅನ್ನೋದಕ್ಕೂ ಆ ಪದಕ್ಕೂ ವ್ಯತ್ಯಾಸ ಇರಲ್ವಾ? ಅವರು ಹೇಳಿರೋದಕ್ಕೆ ಆಡಿಯೋ, ವಿಡಿಯೋ ಎಲ್ಲವೂ ನನ್ನತ್ರ ಸಾಕ್ಷಿ ಇದೆ. ಲಕ್ಷ್ಮಿ ಹೆಬ್ಬಾಳ್ಕರ್‌ನ ನೋಡಿ ಸಾವಿರಾರು ಜನ ರಾಜಕಾರಣಕ್ಕೆ ಬರಲು ಮುಂದಾಗಿದ್ದಾರೆ. ಈಗ ಹೋರಾಟ ಮಾಡಲಿಲ್ಲ ಅಂದ್ರೆ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತೆ ಆಗುತ್ತದೆ. ನಾನು ಸಂಘರ್ಷ ಅಪಮಾನ ಮೆಟ್ಟಿನಿಂತು ಬೆಳೆದಿದ್ದೇನೆ. ಆದರೆ ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತ ಉಂಟಾಗಿದೆ ಎಂದರು.