ಕೇಂದ್ರದಲ್ಲಿನ ಹೊಸ ಸರ್ಕಾರದಿಂದ ಗಣಿಗಾರಿಕೆ ವಿಷಯ ಪರಿಹಾರ: ಸುರೇಶ್ ಪ್ರಭು

 

ಪಣಜಿ ಏ 16 - ಲೋಕಸಭಾ ಚುನಾವಣೆ ನಂತರ ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಗೋವಾದಲ್ಲಿನ ಗಣಿಗಾರಿಕೆ ವಿಷಯವನ್ನು ಇತ್ಯರ್ಥಪಡಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಸುರೇಶ್ ಪ್ರಭು ಮಂಗಳವಾರ ಹೇಳಿದ್ದಾರೆ.  ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಣಿಗಾರಿಕೆ ವಿಷಯವನ್ನು ಬಗೆಹರಿಸಲು ಸಕರ್ಾರ ಸಂಪೂರ್ಣ ಬದ್ಧವಾಗಿದ್ದು, ಸಾಧ್ಯವಿರುವ ಆಯಾಮಗಳ ಬಗ್ಗೆ ಪರಿಶೀಲಿಸಲಾಗುವುದು. ಈ ವಿಷಯವಾಗಿ ತಾವು ಅನೇಕ ಬಾರಿ ಮನೋಹರ್ ಪರಿಕ್ಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಪರಿಕ್ಕರ್ ಅವರು ಕೊನೆಯ ಬಾರಿಗೆ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಾಗ ಅವರೊಂದಿಗೆ ನಾನೂ ಇದ್ದೆ. ಇದಕ್ಕೆ ನಾವು ಸಂಪೂರ್ಣ ಬದ್ದವಾಗಿದ್ದು, ಹೊಸಸರ್ಕಾರ ಬಂದ ತಕ್ಷಣ ಗಣಿಗಾರಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಆದಷ್ಟೂ ಬೇಗನೆ ಈ ವಿಷಯ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.  

      2014 ಮತ್ತು 2015ರಲ್ಲಿ ರಾಜ್ಯ ಸರ್ಕಾರ ನವೀಕರಿಸಿದ್ದ 88 ಗಣಿಗಾರಿಕೆ ಗುತ್ತಿಗೆಗಳನ್ನು ಸುಪ್ರೀಂಕೋಟರ್್ 2018ರ ಫೆ.7ರಂದು ರದ್ದುಪಡಿಸಿತ್ತು. ಇದರಿಂದ ಗೋವಾದಲ್ಲಿ 2018ರ ಮಾರ್ಚ್  15ರಿಂದ ಗಣಿಗಾರಿಕೆಯ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.   ಗಣಿಗಾರಿಕೆ ಆರಂಭಿಸುವುದಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ಭರವಸೆ ನೀಡಿದ್ದರು. ಆದರೆ, ಈ ಭರವಸೆ ಈಡೇರಿರಲಿಲ್ಲ. ಗೋವಾದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಗಣಿಗಾರಿಕೆಯ ಮರು ಆರಂಭ ಪ್ರಮುಖ ಚುನಾವಣಾ ವಿಷಯವಾಗಿತ್ತು. ಈ ಹಿನ್ನೆಲೆಯಲ್ಲಿ ಗಣಿಗಾರಿಕೆ ವಿಷಯವನ್ನು ಬಗೆಹರಿಸುವ ಭರವಸೆಯನ್ನು ಎಲ್ಲ ಪಕ್ಷಗಳು ನೀಡಿದ್ದವು.