ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತಕೋಟಿ ಸಾಕ್ಷಿ

ಲೋಕದರ್ಶನ ವರದಿ

ಕೊಪ್ಪಳ : ಕುಂಭಮೇಳದಲ್ಲಿ ಭಾಗವಹಿಸಿದಷ್ಟೇ ಪುಣ್ಯ ನನಗೆ ಸಿಕ್ಕಿದೆ, ಇಲ್ಲಿಯ ಭಕ್ತಿಯ ಜನಸಾಗರವ ನೋಡಿ ಪುಳಕಿತನಾಗಿರುವೆ ಎಂದು ಕೆನಡಾ ದೇಶದ ಮ್ಯಾಥ್ಯೂ ಫೌಟರ್ಿಯರ್ ಹೇಳಿದರು.

ಐತಿಹಾಸಿಕ ಪ್ರಸಿದ್ಧ ಕೊಪ್ಪಳ  ನಗರದಲ್ಲಿ ಮಂಗಳವಾರ ಜರುಗಿದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಧಾಮರ್ಿಕ ದ್ವಜಾರೋಹಣ ನೆರವೇರಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆಯನ್ನು ನೀಡಿ ನೆರದಿದ್ದ ಲಕ್ಷಾಂತರ ಭಕ್ತ ಸಮೂಹವನ್ನು ನೋಡಿ ಚಕೀತರಾದ ಅವರು ಇಂತಹ ಜಾತ್ರೆ, ಸೇರಿರುವ ಜನಸಮೂಹವನ್ನು ನಾನೇಂದು ನೋಡಿಲ್ಲ, ಇಲ್ಲಿಗೆ ಬಂದು ನಿಮ್ಮೊಂದಿಗೆ ಬೆರತು ನಿಮ್ಮವನಾಗಿರುವೆ, ಇದು ನನ್ನ ಜನ್ಮದ ಪುಣ್ಯವಾಗಿದೆ, ಕುಂಭಮೇಳದಲ್ಲಿ ಬಂದಂತೆ ಅನ್ನಿಸುತ್ತಿದೆ ಇದೊಂದು ಜೀವನದಲ್ಲಿ ಸಿಕ್ಕಿರುವ ಹೊಸ ಅನುಭವ ಹಾಗೂ ಪುಣ್ಯ ಎಂದು ಬಣ್ಣಿಸಿದರು.

ಗವಿಸಿದ್ಧೇಶ್ವರ ಮಠ ಹಾಗೂ ಇಲ್ಲಿನ ಪರಂಪರೆಯ ಬಗ್ಗೆ ಕೇಳಿದ್ದೆ, ಇಂದು ಸ್ವತಃ ನೋಡುವ ಭಾಗ್ಯ ಸಿಕ್ಕಿದ್ದು, ಈ ನಾಡಿನ ಜನರಿಗೆಲ್ಲ ಭಗವಂತ ಒಳಿತು ಮಾಡಲಿ, ಪ್ರತಿಯೊಬ್ಬರಿಗೆ ಆರೋಗ್ಯ ಕಲ್ಪಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು  ನಾನು ಗವಿಸಿದ್ಧೇಶ್ವರ ಜಾತ್ರೋತ್ಸವದ ಬಗ್ಗೆ ಕೇಳಿದ್ದೆ, ಆದರೆ ಇಂದು ಪ್ರತ್ಯಕ್ಷ ನೋಡಿ ಪುನೀತನಾಗಿದ್ದೇನೆ. ಗವಿಸಿದ್ಧೇಶ್ವರ ರಥೋತ್ಸವ ನೋಡಿದಾಗ ನನಗೆ ಅನಿಸಿದ್ದು ಇದು ನಿಜವಾಗಲೂ ದಕ್ಷಿಣ ಭಾರತದ ಕುಂಭಮೇಳ ಎಂದು ಕನ್ನಡದಲ್ಲೇ ಕೆನಡಾ ಮೂಲದ ಧಾರವಾಡದ ಕಲಕೇರಿಯ ಸಂಗೀತ ವಿದ್ಯಾಲಯ ಸ್ಥಾಪಕ ಮ್ಯಾಥ್ಯೂ ಪೌಟರ್ಿಯರ್ ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಆಶೀರ್ವಚನ ನೀಡಿದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಮನುಷ್ಯನ ಜೀವನ ಗಾಳಿಗಿಟ್ಟ ದೀಪದಂತೆ. ಈ ನಿಸರ್ಗದಲ್ಲಿ ಒಂದು ನಿಯಮವಿದೆ, ಅರಳಿದ ಹೂ ಬಾಡಲೇಬೇಕು, ಹಚ್ಚಿದ ದೀಪ ಹಾರಲೇಬೇಕು. ಇದು ಸಾರ್ವತ್ರಿಕ ಸತ್ಯ. ಅದರಂತೆ ಹುಟ್ಟಿದ ಜೀವ ಒಂದು ದಿನ ದೇಹ ತ್ಯಾಗ ಮಾಡಲೇಬೇಕು. ಇಂದು ಸಿದ್ಧಗಂಗಾ ಸ್ವಾಮೀಜಿ ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಸ್ಥೂಲದೇಹ ಮಾತ್ರ ದೂರವಾಗಿದೆ. ಆದರೆ ಆತ್ಮ ನಮ್ಮಲ್ಲೇ ಇದೆ. ಶ್ರೀಗಳು ಜಗತ್ತಿನ ಎಂಟನೇ ಅಧ್ಬುತ. ಪರಮಪೂಜ್ಯರು ಲಕ್ಷಾಂತರ ಬಡಮಕ್ಕಳಿಗೆ ಬೆಳಕಾದವರು. ನಾವೆಲ್ಲ ಸೇರಿ ಇಂದು ಪ್ರಾಥರ್ಿಸೋಣ,  ಹೀಗಾಗಿ ಮೌನಾಚರಣೆ ಮಾಡಿ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡೋಣ ಎಂದು ತಿಳಿಸಿದರು.

ಕೆನಡಾದವ ಬಂದು ಕನ್ನಡದ ಜಾತ್ರಾ ಉದ್ಘಾಟನೆ ಮಾಡುತ್ತಿದ್ದಾನೆ. ಕೆನಡಾ ದೇಶದಲ್ಲಿ ತಾನು ದುಡಿದ ಹಣ ತಂದು ಕನ್ನಡದ ಬಡ ಮಕ್ಕಳಿಗೆ ಜಗತ್ತಿನ ಉತ್ತಮ ಶಿಕ್ಷಣವನ್ನು ಸಂಪೂರ್ಣ, ಯಾವುದೇ ಶಿಫಾರಸು ಇಲ್ಲದೆ ಬಡವರನ್ನು ಗುರುತಿಸಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅವರು ನಮಗೆಲ್ಲ ಮಾದರಿ. ಹೀಗಾಗಿ ಅವರನ್ನು ಈ ಬಾರಿ ಜಾತ್ರೋತ್ಸವಕ್ಕೆ ಚಾಲನೆ ನೀಡಲು ಆಹ್ವಾನಿಸಲಾಗಿದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಗವಿಮಠದ ರಥೋತ್ಸವ ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿದೆ. ಗವಿಮಠವು ಕೇವಲ ಒಂದು ಜಾತಿ, ಮತ, ಪಂಥ, ಕುಲಕ್ಕೆ ಸೀಮೀತವಾಗದೆ ಎಲ್ಲಾ ಜಾತಿ ಜನಾಂಗ, ಮತ, ಪಂಥಗಳಿಗೂ ದಾರಿದೀಪವಾಗಿದೆ. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಎಲ್ಲಾ ವರ್ಗದ ಜನಾಂಗದವರಿಗೂ ತ್ರಿವಿಧ ದಾಸೋಹ ನೀಡುವ ಮೂಲಕ ಈ ಭಾಗದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು.

ಶಾಸಕರಾದ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಅಮರೆಗೌಡ ಭಯ್ಯಾಪುರ, ಬಸವರಾಜ ದಡೆಸೂಗೂರ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಗವಿಸಿದ್ಧೇಶ್ವರನ ಮಹಿಮೆ, ಮಠದ ಸಾಮಾಜಿಕ ಕಾರ್ಯ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಜಿಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಕೆ. ಶರಣಪ್ಪ, ಬಸವರಾಜ ಹಿಟ್ನಾಳ, ಜಿಲ್ಲಾ ನ್ಯಾಯಾಧೀಶರಾದ ಸಂಜೀವ ಕುಲಕಣರ್ಿ,  ಜಿಲ್ಲಾಧಿಕಾರಿ ಸುನೀಲಕುಮಾರ್, ಎಸ್ಪಿ ರೇಣುಕಾ ಸುಕುಮಾರ, ಎಡಿಸಿ ಸಿ.ಡಿ. ಗೀತಾ, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್, ಗವಿಸಿದ್ಧಪ್ಪ ಕರಡಿ, ವಿರೂಪಾಕ್ಷಪ್ಪ ಸಿಂಗನಾಳ ಸೇರಿದಂತೆ ಜನಪ್ರತಿನಿಧಿಗಳು, ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.