ಘನ ತ್ಯಾಜ್ಯ ವಿಲೇವಾರಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ

Meeting of officials of various departments on solid waste disposal

ಘನ ತ್ಯಾಜ್ಯ ವಿಲೇವಾರಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ  

ಹುಬ್ಬಳ್ಳಿ 03: ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.  ಜಾಹೀರಾತು ಫಲಕಗಳಲ್ಲಿ ಮಾತ್ರ ಜಾಹೀರಾತುಗಳನ್ನು ಅಳವಡಿಸದೇ ಗೋಡೆ, ಮರದ ಕೊಂಬೆಗಳಲ್ಲಿ ಜಾಹೀರಾತುಗಳನ್ನು ಅಂಟಿಸಲಾಗಿದೆ. ಪಾದಚಾರಿ ಮಾರ್ಗ ಅತಿಕ್ರಮಣ ಮತ್ತು  ಕಾನೂನು ಬಾಹಿರ ಜಾಹೀರಾತುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಹೇಳಿದರು.   

ಇಂದು ಸರ್ಕ್ಯೂಟ್ ಹೌಸ್ನಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ವಿಭಾಗ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.   

ಪುಟ್ ಪಾತ್ ಮೇಲೆ ಬೈಕ್ ಮತ್ತು ಕಾರುಗಳನ್ನು ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ವಾಹನ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು. ವಾಹನ ಸವಾರರು ಪುಟಪಾತ್ ಮೇಲೆ ವಾಹನ ನಿಲ್ಲಿಸಿದರೆ ದಂಡವನ್ನು ವಿಧಿಸಬೇಕು. ಡಿಜಿಟಲ್ ಜಾಹೀರಾತು ಫಲಕಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಅನಧಿಕೃತವಾಗಿ ಜಾಹೀರಾತುಗಳನ್ನು ಬಿತ್ತರಿಸುವವರ ವಿರುದ್ಧ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.   

ಅವಳಿ ನಗರದಲ್ಲಿನ ಒಳಚರಂಡಿ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿ  

ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಒಳಂಚರಂಡಿಯ ಒಟ್ಟಾರೆ ಉದ್ದ, ಪೂರ್ಣಗೊಂಡ ಒಳಚರಂಡಿ ಕಾಮಗಾರಿಗಳು ಮತ್ತು ಉಳಿದ ಕಾಮಗಾರಿಯ ಮಾಹಿತಿ, ತಪ್ಪಿ ಹೋಗಿರುವ ಒಳಚರಂಡಿ ಸಂಪರ್ಕಗಳು,  ಮನೆ ಮನೆಯಿಂದ ಸಂಗ್ರಹವಾಗುವ ತ್ಯಾಜ್ಯಗಳು, ಘನ ತ್ಯಾಜ್ಯಗಳು, ಕೊಳಚೆ ನೀರಿನ ಸಂಸ್ಕರಣ ಘಟಕದ ಕಾರ್ಯಗಳು ಸೇರಿದಂತೆ ಇತರ ಮಾಹಿತಿಗಳನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಆ ಮೂಲಕ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿವೆ ಎಂದರು.   

ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ವಿಲೇವಾರಿ ಮಾಡಿ  

ಮೂಲದಲ್ಲಿಯೇ ತ್ಯಾಜ್ಯ ವಸ್ತುಗಳನ್ನು ಹಸಿ ಕಸ, ಒಣ ಕಸ ಮತ್ತು ಗೃಹ ಬಳಕೆಯ ಹಾನಿಕಾರಕ ತ್ಯಾಜ್ಯ ಎಂದು ವಿಂಗಡಿಸಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ಪಾರಂಪರಿಕ ಮತ್ತು ಕಟ್ಟಡ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾಗುತ್ತದೆ. ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಮಾಲೀಕರು ಖಾಲಿ ನಿವೇಶನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗುತ್ತದೆ. ಸ್ವಚ್ಛತೆ ಕಾಪಾಡದಿದ್ದರೆ ನೋಟಿಸ್ ನೀಡಬಹುದು. ಘನ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ವಲಯ, ಮಳೆ ನೀರು ಕೊಯ್ಲು ಕುರಿತು ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.   

ಕಸಾಯಿ ಖಾನೆಗಳ ತ್ಯಾಜ್ಯ ವಿಲೇವಾರಿ  

ಹುಬ್ಬಳ್ಳಿ ಧಾರವಾಡ ನಗರಗಳಲ್ಲಿರುವ ಕಸಾಯಿ ಖಾನೆಗಳಲ್ಲಿ ಸಹ ಹೆಚ್ಚಾಗಿ ತ್ಯಾಜ್ಯ ಸಂಗ್ರಹವಾಗುತ್ತದೆ. ಅದರಲ್ಲೂ ಬಕರೀದ್, ದಸರಾ ಹಾಗೂ ಇತರೆ ಹಬ್ಬಗಳಂದು ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗುವುದು. ಕಸಾಯಿ ಖಾನೆಗಳಲ್ಲಿನ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಕಸಾಯಿ ಖಾನೆ ಮಾಲೀಕರಿಗೆ ಅಧಿಕಾರಿಗಳು ತಿಳಿಸಬೇಕು ಎಂದು ತಿಳಿಸಿದರು.   

ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆ  

ಪ್ರತಿ ವಲಯದಲ್ಲಿ ಏಷ್ಟು ಆಸ್ಪತ್ರೆಗಳಿವೆ ಎನ್ನುವುದರ ಬಗ್ಗೆ ಮಾಹಿತಿ ಸಅಗ್ರಹಿಸಲು ಅಧಿಕಾರಿಗಳು ಮುಂದಾಗಬೇಕು. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎನ್ನುವುದರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಆಸ್ಪತ್ರೆಗಳ ಅಧಿಕಾರಿಗಳು, ವೈದ್ಯರ ಸಭೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.   

ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ತಡೆಯಿರಿ  

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರಂತೆ ಏಕ ಬಳಕೆಯ ಪ್ಲಾಸ್ಟಿಕ್ ನ್ನು ನಿಷೇಧಿಸಲಾಗಿದೆ. ಏಕ ಬಳಕೆಯ ಪ್ಲಾಸ್ಟಿಕ್ ಉಪಯೋಗಿಸುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ದಂಡವನ್ನು ವಿಧಿಸಿ, ಅವರ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಣ ಮಾಡಿ. ಪಾಲಿಕೆ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ, ಸೂಕ್ತ ಕ್ರಮ ವಹಿಸಬೇಕು. ಹೊಟೇಲ್, ಕ್ಯಾಟರಿಂಗ್, ಕಲ್ಯಾಣ ಮಂಟಪ, ವಸತಿ ನಿಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ತಿಳಿಸಬೇಕು. ಈ ಕುರಿತು ಅಧಿಕಾರಿಗಳು ಸಭೆ ನಡೆಸಿ, ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.   

ತರಕಾರಿ ತ್ಯಾಜ್ಯ ವಿಲೇವಾರಿ ಸೂಕ್ತವಾಗಲಿ  

ಏಷ್ಯಾದ ಎರಡನೇ ದೊಡ್ಡ ಎಪಿಎಂಸಿ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗುವುದು. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಜಲ ಹಾಗೂ ವಾಯು ಮಾಲಿನ್ಯವಾಗದಂತೆ ಕ್ರಮ ವಹಿಸಬೇಕಾಗುತ್ತದೆ.   

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಮಾತನಾಡಿ, ಒಳ ಚರಂಡಿ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿ ಸಿದ್ಧ ಪಡಿಸಲಾಗುವುದು. ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನ್ನು ನಿಯಂತ್ರಣಕ್ಕೆ ತರಲಾಗುತ್ತದೆ ಎಂದರು.   

ಸಭೆಯಲ್ಲಿ ಪರಿಸರ ಅಧಿಕಾರಿ ಜಗದೀಶ್, ಪಾಲಿಕೆಯ ವಲಯ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.