ಆಂಜನೇಯನ ಸ್ವಾಮಿ ನಿಷ್ಠೆ ನಮಗೆಲ್ಲ ಪ್ರೇರಣೆಯಾಗಲಿ: ಕಟ್ಟಿ
ವಿಜಯಪುರ 03: ಪುಣ್ಯಭೂಮಿ ಮತ್ತು ಧರ್ಮಭೂಮಿಯಾದ ನಮ್ಮ ಭಾರತ ದೇಶವು ಇತಿಹಾಸ, ಪರಂಪರೆ, ಧಾರ್ಮಿಕ ಐತಿಹ್ಯಗಳಿಗೆ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಸನಾತನ ಮತ್ತು ಹಿಂದೂ ಧರ್ಮದಲ್ಲಿ ರಾಮನು ಸತ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಧರ್ಮ ಸಹಿಂಷ್ಣತೆಯ ಪ್ರತೀಕವಾಗಿದ್ದಾನೆ. ರಾಮನ ಆಳ್ವಿಕೆಯ ಕಾಲದಲ್ಲಿ ಕಂಡ ಸತ್ಯ, ನ್ಯಾಯ, ನೀತಿ, ಪಿತೃತ್ವ ಭಕ್ತಿ, ಸಹೋದರ ವಾತ್ಸಲ್ಯ, ಸಹಿಂಷ್ಣುತೆ, ಜನಹಿತ, ತಾಳ್ಮೆ ಇವೆಲ್ಲವುಗಳು ಶ್ರೀರಾಮನ ಆದರ್ಶಗಳು ನಮ್ಮ ಭಾವೀ ಜನಾಂಗಕ್ಕೆ ಪ್ರೇರಣೆಯಾಗಬೇಕು. ಇಡೀ ಮನುಕುಲಕ್ಕೆ ಸತ್ಯಪರತೆ, ನ್ಯಾಯನಿಷ್ಠುರತೆ ಮತ್ತು ಪ್ರಾಮಾಣಿಕತೆಯಂತಹ ಸದ್ಗುಣಗಳ ಮೂಲ ರಾಜ್ಯಭಾರ ಮಾಡಿ ಇಡೀ ಜಗತ್ತಿಗೆ ಸುಪ್ರಸಿದ್ಧ ರಾಜನಾಗಿ ಮಾನವೀಯತೆ ಮೆರೆದಿದ್ದರು. ಅಧಿಕಾರ ಲೋಭವಿಲ್ಲದೇ ಸ್ವಯಂ ಸ್ಪೂರ್ತಿಯಿಂದ ಎಲ್ಲವನ್ನು ತ್ಯಾಗ ಮಾಡಿದ ಮಹಾನ ನೀತಿವಂತ ಮತ್ತು ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದ ರಾಮಚಂದ್ರ. ಅವರ ನೀತಿ-ನಿಯಮ, ಸದ್ಗುಣ, ಸಚ್ಚಾರಿತ್ರ್ಯ, ಸನ್ನಡತೆ, ಸದ್ಭಾವಗಳೆಲ್ಲವೂ ನಮ್ಮ ಬದುಕಿಗೆ ದಾರೀದೀಪವಾಗಿವೆ ಎಂದು ವಿಜಯಪುರ ಪ್ರಸಿದ್ಧ ಅರ್ಚಕ ಮಧುಸೂದನಾಚಾರ್ಯ ಕಟ್ಟಿ ಅವರು ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಆಂಜನೇಯ ದೇವಸ್ಥಾನದ 5ನೇಯ ವರ್ಷದ ಜಾತ್ರಾ ಮಹೋತ್ಸವದಲ್ಲಿ ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದು ನಶಿಸಿ ಹೋಗುತ್ತಿರುವ ನಮ್ಮ ಧಾರ್ಮಿಕ ಪರಂಪರೆ, ಸಂಸ್ಕೃತಿ-ಸಂಸ್ಕಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ. ನಮ್ಮ ಭರತ ಖಂಡದ ಇತಿಹಾಸ, ಐತಿಹ್ಯ, ಪೌರಾಣಿಕ, ಪಾರಂಪರಿಕ ಮತ್ತು ಧಾರ್ಮಿಕ ವಿಶೇಷತೆಗಳ ಬಗ್ಗೆ ತಿಳಿಸಿಕೊಡಬೇಕಾಗಿರುವದು ಇಂದಿನ ಅಗತ್ಯತೆಯಾಗಿದೆ. ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ, ಪಾಲಕರು ಮೊದಲು ಸಂಸ್ಕೃತಿ-ಸಂಸ್ಕಾರ, ಜೀವನ ಮೌಲ್ಯ, ನೈತಿಕ, ಅಧ್ಯಾತ್ಮಿಕ, ವೈಚಾರಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮತ್ತು ಅನುಸರಿಸುತ್ತಾ ತಮ್ಮ ಮಕ್ಕಳಲ್ಲಿ ದೈನಂದಿನವಾಗಿ ಒಡಮೂಡುವಂತೆ ಮಾದರಿಯಾಗಬೇಕು. ನಮ್ಮ ದೇಶದ ಪವಿತ್ರ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಭಗವದ್ಘೀತೆಗಳ ಬಗ್ಗೆ ಕಥಾ ಸಾರಾಂಶಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕಾದುದು ಇಂದಿನ ಅಗತ್ಯತೆಯಾಗಿದೆ ಎಂದರು.
ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯ, ಇತಿಹಾಸ, ಪರಂಪರೆ, ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನವರಸಪುರ ಎಲ್ಲ ಬಡಾವಣೆಗಳ ಜನರಲ್ಲಿ ದೈವಿಕ, ಅಧ್ಯಾತ್ಮಿಕ, ಧಾರ್ಮಿಕ-ಸಾಮಾಜಿಕ ಪದ್ಧತಿ, ಸಂಪ್ರದಾಯ, ಪ್ರವಚನ, ಕೀರ್ತನೆ, ಭಜನೆ, ಹನುಮಾನ ಚಾಲಿಸ ಪಠಣದಂತಹ ವಿನೂತನವಾದ ಧಾರ್ಮಿಕ ಮತ್ತು ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ, ದೇವಸ್ಥಾನದಲ್ಲಿ ಗೋ-ರಕ್ಷಣೆ ಮತ್ತು ಪಾಲನೆಗಾಗಿ ವಿಶೇಷವಾದ ವ್ಯವಸ್ಥೆಯೊಂದಿಗೆ ಅನೇಕ ಸಮಾಜೋದ್ಧಾರಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು
ಮುಂಜಾನೆ 8 ಗಂಟೆಗೆ ಅಥಣಿ ರಸ್ತೆಯ ಹನುಮಾನ ದೇವಸ್ಥಾನದಿಂದ ಗೋವು ಪೂಜೆಯೊಂದಿಗೆ ಶ್ರೀ ರಾಮ ಜಯ ರಾಮ, ಜಯ ಜಯ ರಾಮ, ಭಜರಂಗಿ ಕೀ ಜೈ ಎನ್ನುವ ಜಪದೊಂದಿಗೆ ಹೊರಟ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆಯು ಪ್ರತೀಕ್ಷಾ ನಗರ, ವನಶ್ರೀ ಕಾಲನಿ, ವಿಜಯಾ ಕಾಲನಿ, ಸೇನಾ ನಗರ, ಹವಾಲ್ದಾರ ಕಾಲನಿ, ಏಕತಾ ನಗರ ಹೀಗೆ ನವರಸಪುರದ ಎಲ್ಲ ಬಡಾವಣೆಗಳ ಮೂಲಕ ಸಂಚರಿಸಿ, ಕೊನೆಗೆ ಎನ್.ಜಿ.ಓ ಕಾಲನಿಯ ಆಂಜನೇಯ ದೇವಸ್ಥಾನಕ್ಕೆ ಬಂದು ತಲುಪಿತು. ಮೆರವಣಿಗೆಯಲ್ಲಿ ಶ್ರೀರಾಮ-ಸೀತೆ, ಲಕ್ಷ್ಮಣ, ಹನುಮಂತ, ಶ್ರೀಕೃಷ್ಣ, ದೇವಿಯ ಛದ್ಮವೇಷ ಧರಿಸಿದ ಮಕ್ಕಳ ದೃಶಗಳು ಜನರ ಗಮನ ಸೆಳೆಯಿತು.
ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭರತನಾಟ್ಯ, ಸಂಪೂರ್ಣ ರಾಮಾಯಣದ ಎಲ್ಲ ಸನ್ನಿವೇಶ ಮತ್ತು ಕಥಾನಕಗಳ ನೃತ್ಯ ರೂಪಕ ಮತ್ತು ರಾಮನ ಸತ್ಯನಿಷ್ಠೆಯ ಸಂದರ್ಭಗಳ ಬಗ್ಗೆ ತಾಂಡವ ನೃತ್ಯ ಅಕ್ಯಾಡೆಮಿಯ ಮಕ್ಕಳಿಂದ ಮೂಡಿಬಂದ ಕಾರ್ಯಕ್ರಮವು ಪ್ರೇಕ್ಷಕರನ್ನು ಮನರಂಜಿಸಿತು.
ದೇವಸ್ಥಾನ ಸೇವಾ ಸಮಿತಿಯ ಶಿವಪ್ಪ ಸಾವಳಗಿ, ಬಾಬು ಕೋಲಕಾರ, ಲಕ್ಷ್ಮಣ ಶಿಂಧೆ, ಬಿ.ಎನ್.ಕೂಟನೂರ, ಪ್ರೊ. ಎಸ್.ಎಸ್.ಉಕುಮನಾಳಮಠ, ಶ್ರೀರಾಮ ದೇಶಪಾಂಡೆ, ಶಿವಾನಂದ ಬಿಜ್ಜರಗಿ, ಡಾ. ಮಹಾದೇವ ಪಾಟೀಲ, ಅನೀಲ ಪಾಟೀಲ, ಶ್ರೀಧರ ತಾಟೆ, ಮಂಜುನಾಥ ಹೆರಕಲ್, ಬಲವಂತ ಬಳೂಲಗಿಡದ, ಎಂ.ಆರ್.ಪಾಟೀಲ, ಪ್ರೊ. ಎಂ.ಎಸ್.ಖೊದ್ನಾಪೂರ, ಆರ್. ಬಿ. ಕುಮಟಗಿ, ಸುರೇಶ ಹಲಕುಡೆ, ಇನ್ನಿತರರು ಸಹ ಉಪಸ್ಥಿತರಿದ್ದರು. ನವರಸಪುರ ಎಲ್ಲ ಬಡಾವಣೆಗಳ ನೂರಾರು ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.