ಯುವ ಜನತೆಗೆ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವಲ್ಲಿ ಮಠಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ: ರಮೇಶ ಭೂಸನೂರ
ಸಿಂದಗಿ 19: ಇಂದಿನ ಯಾಂತ್ರಿಕ ಮತ್ತು ತಾಂತ್ರಿಕ ಜೀವನಶೈಲಿಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಸಂಸ್ಕೃತಿ, ಸಂಸ್ಕಾರಗಳು ಮಾಯವಾಗಿ ಯಾರಿಗೂ ಗೌರವ ನೀಡದೆ ಕ್ಷಣಿಕ ಸುಖದತ್ತ ಸಾಗುತ್ತಿದ್ದಾರೆ. ಯುವ ಜನತೆಗೆ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವಲ್ಲಿ ಮಠಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ. ರುದ್ರಮುನಿ ಶಿವಾಚಾರ್ಯರ 47ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಉಜ್ಜಯಿನಿ ಶ್ರೀಮದ್ ಸಿದ್ದಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮದ ಮಹಾಮಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ನೀಡಬೇಕಾಗಿರುವುದು ಅನಿವಾರ್ಯ. ನಾವೆಲ್ಲರೂ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳೋಣ. ಧರ್ಮವನ್ನು ಎಲ್ಲರೂ ಸೇರಿ ಉಳಿಸೋಣ. ಜಗತ್ತು ಸಾಮಾನ್ಯವಲ್ಲ, ನಾಲ್ಕುದಿನ ಬಾಳಿ ಬದುಕಿ, ಎಲ್ಲವನ್ನು ಇಲ್ಲೇ ಬಿಟ್ಟು ಮತ್ತೆ ಮರಳಿ ಮಣ್ಣು ಸೇರುವ ಈ ದೇಹಕ್ಕೆ ದುರಾಸೆ ಅಂಟಿಕೊಂಡಿದೆ. ಆ ದುರಾಸೆ ದೂರವಾಗಬೇಕಾದರೆ ಇಂತಹ ಧರ್ಮ ಕಾರ್ಯಗಳಲ್ಲಿ ಪಾಲ್ಗೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಯಶವಂತರಾಯಗೌಡ ರೂಗಿ ಮಾತನಾಡಿ, ಇಂದಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕೆಲಸ ಆಗಬೇಕಿದೆ. ಪೋಷಕರು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚನೆ ಮಾಡಬೇಕು. ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಲು ಪಣ ತೊಡಬೇಕು. ಮೊಬೈಲ್, ಕಂಪೂಟರ್‌ಗಳಂತಹ ಆಧುನಿಕ ತಂತ್ರಜ್ಞಾನಗಳ ಹಾವಳಿಯಿಂದಾಗಿ ಸಂಸ್ಕಾರ ಹಾಗೂ ಸಂಸ್ಕ್ಕೃತಿ ಮರೆಯಾಗುತ್ತಿದೆ. ಹೀಗಾಗಿ ಇಂದಿನ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಪಾಠವಾಗಬೇಕಿದೆ. ಈ ನಿಟ್ಟಿನಲ್ಲಿ ಮಠ-ಮಂದಿರಗಳಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಳಲ್ಲಿ ಮಕ್ಕಳೊಂದಿಗೆ ಭಾಗವಹಿಸಬೇಕು ಎಂದು ಹೇಳಿದರು.
ಆಫಜಪೂರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದಿಂದ ಮಕ್ಕಳು ಹೊರ ಬರುತ್ತಿದ್ದಾರೆ. ಗುರು ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿದೆ. ಪೋಷಕರಾದವರು ಮಕ್ಕಳಿಗೆ ತಿಳಿ ಹೇಳಬೇಕಾದ ಅಗತ್ಯತೆ ಇದೆ ಎಂದರು.
ಭಾರತದ ಯುವ ಜನತೆಯಲ್ಲಿ ಜ್ಞಾನ ಸಂಪತ್ತಿಗೆ ಕೊರತೆ ಇಲ್ಲ. ಆದರೆ, ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಭಾರತೀಯರು ಇಂದು ಜಗತ್ತಿನಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಮಕ್ಕಳಿಗೆ ವಿಶಾಲವಾದ ಭವಿಷ್ಯವಿದೆ. ಅದನ್ನು ಸಾಕಾರಗೊಳಿಸಬೇಕಾದ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.
ಕಡದಾಳ ಶ್ರೀಗಳು, ಅಗರಖೇಡ ಶ್ರೀಗಳು, ಸೂರ್ಯಕಾಂತ ಶಾಸ್ತ್ರೀಗಳು ಚಿದಾನಂದ ಶಾಸ್ತ್ರೀಗಳ, ಸಂತೋಷ ಶಾಸ್ತ್ರೀಗಳ, ಶಂಭುಲಿಂಗ ಶಾಸ್ತ್ರೀಗಳು, ಶರಣಯ್ಯ ಶಾಸ್ತ್ರೀಗಳ, ಶಂಕರಯ್ಯ ಶಾಸ್ತ್ರೀಗಳು, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಡಾ.ಅನಿಲ ನಾಯಕ, ನಿಂಗನಗೌಡ ಪಾಟೀಲ ಡಂಬಳ, ಆನಂದ ಚೌಧರಿ, ಶರಣಗೌಡ ಬಿರಾದಾರ, ಬಸವರಾಜ ಹೂಗಾರ, ಚಂದ್ರಶೇಖರ ಹೂಗಾರ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಸಂಗನಗೌಡ ಪಾಟೀಲ ಅಗಸಬಾಳ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಶಂಕರಗೌಡ ಬಿರಾದಾರ ಸೇರಿದಂತೆ ಶ್ರೀಮಠದ ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.