ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕಂಪ್ಲಿಯಲ್ಲಿ ಬೃಹತ್ ಪ್ರತಿಭಟನೆ- ಸಂಪೂರ್ಣ ಬಂದ್ ಯಶಸ್ವಿ.

Massive protest in Kampli condemning Union Home Minister Amit Shah's statement - complete bandh suc


ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕಂಪ್ಲಿಯಲ್ಲಿ ಬೃಹತ್ ಪ್ರತಿಭಟನೆ- ಸಂಪೂರ್ಣ ಬಂದ್ ಯಶಸ್ವಿ. 

ಕಂಪ್ಲಿ 30: ಇತ್ತೀಚೆಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ರಾಜ್ಯಸಭೆಯ ಕಲಾಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆ ಹಾಗೂ ಸಂಪೂರ್ಣ ಕಂಪ್ಲಿ ಬಂದ್‌ಗೆ ಕರೆ ನೀಡಿದ್ದು ಸಂಪೂರ್ಣ ಯಶಸ್ವಿಯಾಗಿದೆ. ಸೋಮವಾರ ಬೆಳಿಗ್ಗೆ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಹತ್ತಿರದಲ್ಲಿ ಕಂಪ್ಲಿಯ ಸಂವಿಧಾಣ ಸಂರಕ್ಷಣಾ ಮಹಾ ಒಕ್ಕೂಟ ಕರೆ ನೀಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಶಾಸಕರಾದ ಜೆ.ಎನ್‌.ಗಣೇಶ್ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಬೃಹತ್ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಯಲ್ಲಿ ಸಾಗಿ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಮಹಾ ಒಕ್ಕೂಟದ ಅನೇಕ ಮುಖಂಡರು ರಾಜ್ಯ ಸಭೆಯ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ “ಅಂಬೇಡ್ಕರ್ ಹೆಸರು ಹೇಳುವುದು ಈಗ ಶೋಕಿಯಾಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ, ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು” ಎಂದು ಹೇಳುವ ನಾಲಿಗೆ ಹರಿಬಿಟ್ಟು ಬಾಬಾ ಸಾಹೇಬರಿಗೆ ಅವಮಾನ ಮಾಡುವ ಮೂಲಕ ರಾಷ್ಟ್ರದ್ರೋಹ ಕೃತ್ಯವನ್ನು ಎಸಗಿದ್ದಾರೆ. ಸಂವಿಧಾನದತ್ತವಾದ ಕೇಂದ್ರದ ಗೃಹ ಸಚಿವ ಸ್ಥಾನದಲ್ಲಿದ್ದುಕೊಂಡು ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಅವರ ಬಗ್ಗೆಯೇ ಹೀನಾಯವಾಗಿ ಹೇಳಿಕೆ ನೀಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.ಕೇಂದ್ರ  ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಮನುವಾದ ಹೇರಲು ಹೊರಟಿದೆ. ಅದರ ಭಾಗವಾಗಿ ಗೃಹ ಸಚಿವ ಅಮಿತ್‌ಶಾ ಮಾತನಾಡಿದಾರೆ. ಈ ಹೇಳಿಕೆ ಅತ್ಯಂತ ಖಂಡನಾರ್ಹವಾಗಿದ್ದು, ಈ ಕೂಡಲೇ ಗೃಹ ಸಚಿವ ಅಮಿತ್ ಶಾ ದೇಶದ ಜನತೆಯಲ್ಲಿ ಬೇಷರತ್ ಕ್ಷಮೆಯಾಚಿಸಿ, ಸಚಿವ ಸ್ಥಾನದಿಂದ ಕೆಳಗಿಳಿಯಬೇಕು. ಬಾಬಾ ಸಾಹೇಬರು ನೀಡಿದ ಸಂವಿಧಾನದ ಅಡಿಯಲ್ಲಿ ಸಚಿವ ಸ್ಥಾನ ಪಡೆದಿರುವ ಅಮಿತ್‌ಶಾ ಸಂವಿಧಾನ ಅಡಿಯಲ್ಲಿ ಕೆಲಸ ನಿರ್ವಹಿಸದೇ ಮನುವಾದ ಸಿದ್ಧಾಂತವನ್ನಿಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ದೇಶದ ರೈತರ, ಕಾರ್ಮಿಕರ, ಮಹಿಳೆಯರನ್ನು ಸಂಪೂರ್ಣ ಕಡೆಗಣಿಸಿಲಾಗಿದೆ. ದೇಶದ ಸರ್ವ ಜನರ ವಿಮೋಚನೆಗಾಗಿ ಹತ್ತಾರು ಪದವಿಗಳನ್ನು ಪಡೆದು, ಹತ್ತಾರು ದೇಶಗಳನ್ನು ಸುತ್ತಿ ಆಳ ಅಧ್ಯಯನದೊಂದಗೆ ಸಂವಿಧಾನ ನೀಡಿದ ಅದರ ನಿರ್ಮಾತೃವನ್ನೇ ಹೀಗೆಳೆಯುವ ಕೇಂದ್ರ ಗೃಹ ಸಚಿವರು ಕೂಡಲೇ ರಾಜಿನಾಮೆ ನೀಡಬೇಕು, ಅವರ ವಿರುದ್ಧ ರಾಷ್ಟ್ರದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇಲ್ಲವೇ ಘನತೆವೆತ್ತ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ನಂತರ ಘನತೆವೆತ್ತ ರಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರಗಳನ್ನು ತಹಸಿಲ್ದಾರ್ ಶಿವರಾಜ ಶಿವಪುರ ಅವರಿಗೆ ಸಲ್ಲಿಸಿದರು.ತಹಸಿಲ್ದಾರ್ ಶಿವರಾಜ ಶಿವಪುರ ಮನವಿ ಸ್ವೀಕರಿಸಿ ಮಾತನಾಡಿ ಮಹಾ ಒಕ್ಕೂಟದ ಮನವಿ ಪತ್ರಗಳನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವುದಾಗಿ ಹಾಗೂ ಪ್ರತಿಭಟನಾಕಾರರು ಶಾಮತಿಯುತವಾಗಿ ಪ್ರತಿಭಟನೆ ಹಾಗೂ ಕಂಪ್ಲಿ ಬಂದ್ ನಡೆಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ಪದಾಧಿಕಾರಿಗಳಾದ ಜಿ.ರಾಮಣ್ಣ, ಎ.ಸಿ.ದಾನಪ್ಪ, ಎಂ.ಸಿ.ಮಾಯಪ್ಪ, ಬಾವಿಕಟ್ಟೆ ನಾಗೇಂದ್ರ, ಬಾವಿಕಟ್ಟೆ ದೇವೇಂದ್ರ, ಎಚ್‌.ಶೇಖರ್, ಕೆ.ಎಸ್‌.ಚಾಂದ್‌ಬಾಷಾ, ವೀರಾಂಜಿನೇಯಲು,ಲಕ್ಷ್ಮಣ, ಷಣ್ಮುಖಪ್ಪ,ಮೆಟ್ರಿ ಕುಮಾರ್,ಎಚ್‌.ಜಗದೀಶ್,ಬಿ.ವಿ.ಗೌಡ, ಕೊಟ್ಟೂರು ರಮೇಶ್,ಕರಿಯಪ್ಪ ಗುಡಿಮನಿ, ವಸಂತರಾಜ್ ಕಹಳೆ,ಟಿ.ವಿರುಪಣ್ಣ,ಮರಿಯಪ್ಪ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಪುರಸಭೆ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು. 

ಕಂಪ್ಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ಹಾಗೂ ಕಂಪ್ಲಿ ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತೋರಣಗಲ್ಲು ಉಪವಿಭಾಗದ ಡಿವೈಎಸ್ಪಿ  ಪ್ರಸಾದ್ ಗೋಖಲೆ ನೇತೃತ್ವದಲ್ಲಿ ಪಿಐ ವಾಸುಕುಮಾರ ಕೆ.ಬಿ. 6 ಪಿಎಸ್‌ಐಗಳು, ಎಎಸ್‌ಐಗಳು, ಜಿಲ್ಲಾ ಶಸಸ್ತ್ರ ಮೀಸಲು ಪಡೆ ಹಾಗೂ ನೂರಾರು ಪೊಲೀಸರು ವ್ಯಾಪಕ ಬಂದೋಬಸ್ತ್‌ ಏರಿ​‍್ಡಸಿದ್ದರು. ಪಟ್ಟಣದಲ್ಲಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದ್ದವು.