ಇತಿಹಾಸದಲ್ಲಿ ಬಿಟ್ಟು ಹೋದ ಹಲವಾರು ಸಂಗತಿಗಳನ್ನು ಮರುನಿರೂಪಿಸಬೇಕಾಗಿದೆ : ಡಾ.ಜಗನ್ನಾಥ ದೊಡಮನಿ

Many facts left behind in history need to be recounted : Dr. Jagannath Dodamani

ಇತಿಹಾಸದಲ್ಲಿ ಬಿಟ್ಟು ಹೋದ ಹಲವಾರು ಸಂಗತಿಗಳನ್ನು ಮರುನಿರೂಪಿಸಬೇಕಾಗಿದೆ : ಡಾ.ಜಗನ್ನಾಥ ದೊಡಮನಿ  

ದಾರವಾಡ 05 : ನಮ್ಮ ದೇಶದ ಇತಿಹಾಸದಲ್ಲಿ ಕೆಲವು ವೈಯಕ್ತಿಕ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿಯೇ ಕೆಳವರ್ಗದವರ ಇತಿಹಾಸವನ್ನು ಮರೆಮಾಚಿರುವುದನ್ನು ಕಾಣುತ್ತೇವೆ ಎಂದು ಅಥಣಿಯ ನಿವೃತ್ತ ಪ್ರಾಚಾರ್ಯ ಡಾ.ಜೆ.ಪಿ.ದೊಡಮನಿ ವಿಷಾಧಿಸಿದರು. ಅವರು ಗಣಕರಂಗ ಸಂಸ್ಥೆಯು  207ನೇಯ ಭೀಮಾ ಕೋರೆಗಾಂವ ಶೌರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು.   

ನಮ್ಮ ದೇಶದ ಇತಿಹಾಸವನ್ನು ಬ್ರಿಟಿಷರು ಕಟ್ಟಿಕೊಟ್ಟಷ್ಟು ವಸ್ತುನಿಷ್ಠವಾಗಿ ಮತ್ತು ಸತ್ಯನಿಷ್ಠವಾಗಿ ಬೇರೆ ಯಾರೂ ಕಟ್ಟಿಕೊಟ್ಟಿಲ್ಲ. ನಮ್ಮ ದೇಶದ ಅನುಕೂಲಸಿಂಧು ಇತಿಹಾಸಕಾರರಿಂದ ಮರೆಮಾಚಿದ, ತಿರುಚಿದ, ಉದ್ದೇಶಪೂರ್ವಕವಾಗಿ ಬಿಟ್ಟು ಹೋದ ಇತಿಹಾಸವನ್ನು ಮರುನಿರೂಪಿಸಿಬೇಕಾಗಿದೆ. ಅಂದು 1927ರಲ್ಲಿ ಬಾಬಾಸಾಹೇಬರು ಇತಿಹಾಸದ ಕಾಲಗರ್ಭದಲ್ಲಿ ಹೂತು ಹೋಗಿದ್ದ ಭೀಮಾ ಕೋರೆಗಾಂವ ವೀರ ಯೋಧರ ಚರಿತೆಯನ್ನು ನಮಗೆಲ್ಲ ಪರಿಚಯಿಸಿದ್ದರಿಂದ ಗೊತ್ತಾಯಿತು. ಇಲ್ಲದಿದ್ದರೆ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಹಿಪ್ಪರಗಿ ಸಿದ್ಧರಾಮ ಸಂಪಾದಿತ “ನಮ್ಮ ಸಂವಿಧಾನ” ಕಥಾಸಂಕಲನ ಮತ್ತು ಗಣಪತಿ ಗೋ. ಚಲವಾದಿ (ಗಗೋಚ) ವಿರಚಿತ “ಎದ್ಯಾಗಿನ ಬ್ಯಾನಿ” ಕಥಾಸಂಕಲನವನ್ನು ಬೆಳಗಾವಿಯ ಪ್ರೊ.ಹರೀಶ ಕೋಲ್ಕಾರ ಲೋಕಾರೆ​‍್ಣ ಮಾಡಿ ಮಾತನಾಡಿದರು.  ಎರಡೂ ಕೃತಿಗಳನ್ನು ಧಾರವಾಡದ ಅಧ್ಯಾಪಕ ಡಾ.ವಿ.ಜಿ.ಪೂಜಾರ ಪರಿಚಯಿಸಿದರು. ನಂತರ ವಿವಿಧ ಕ್ಷೇತ್ರದ ಸಾಧಕರಾದ ಡಾ.ಜಗನ್ನಾಥ ದೊಡಮನಿ(ಜಾಗೃತಿ), ಪ್ರಭಾ ಭೋರಗಾಂವಕರ(ಪ್ರಕಾಶನ), ಡಾ.ಶರಣಮ್ಮ ಪಾಟೀಲ(ಶಿಕ್ಷಣ), ಡಾ.ವೈ,ವೈ.ಕೊಕ್ಕನವರ(ಸಾಹಿತ್ಯ), ಗಾಯತ್ರಿ ಹಡಪದ(ರಂಗಭೂಮಿ), ಬಸವರಾಜ ಹಿರೇಮಠ (ಪತ್ರಿಕಾರಂಗ), ಶ್ರೀಶೈಲಗೌಡ ಕಮತರ (ಸಮಾಜಸೇವೆ), ಮಹೇಶ ಎಂ. ತುಪ್ಪದ (ಸಮಾಜಸೇವೆ), ಪಾರ್ವತಿದೇವಿ ಎಂ. ತುಪ್ಪದ (ಸಾಹಿತ್ಯ) ಮುಂತಾದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಗಣಕರಂಗ ಕಥಾಸ್ಪರ್ಧೆ ಮತ್ತು ಕವನಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಗೌರವಪೂರ್ವಕವಾಗಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.