ಮಲ್ಲಮ್ಮ ಜಯಂತಿ ನಿರಾಕರಣೆ: ಸಮಾಜ ಬಾಂಧವರಿಂದ ಧರಣಿ
ಯರಗಟ್ಟಿ 11: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲು ಅಧಿಕಾರಿ, ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಶನಿವಾರ ರಾತ್ರಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ರೆಡ್ಡಿ ಸಮುದಾಯದ ಜನ ದಿಢೀರ್ ಧರಣಿ ನಡೆಸಿದರು. ಸರ್ಕಾರಿ ಕಚೇರಿ, ಶಾಲೆ, ಕಾಲೇಜು ಸೇರಿದಂತೆ ಸರ್ಕಾರಕ್ಕೆ ಸೇರಿದ ಎಲ್ಲ ಸ್ಥಳಗಳಲ್ಲೂ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ. ಯರಗಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಈ ಆದೇಶ ಉಲ್ಲಂಘನೆ ಮಾಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜದವರು ಆಗ್ರಹಿಸಿದರು. ಪಂಚಾಯಿತಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ಕೂಡ ಕರೆದಿಲ್ಲ. ಒಂದು ಸಮುದಾಯದ ಭಾವನೆಗೆ ಧಕ್ಕೆ ತಂದ ಅಧಿಕಾರಿಗಳು ನಡೆ ಖಂಡನೀಯ ಎಂದು ಆಕ್ರೋಶ ಹೊರಹಾಕಿದರು. ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯ ನಿಖಿಲ ಪಾಟೀಲ, ಸಂತೋಷ ದೇವರಡ್ಡಿ, ಗೀರೀಶ ದೇವರಡ್ಡಿ, ವೆಂಕಟೇಶ ದೇವರಡ್ಡಿ, ವಿಶಾಲಗೌಡ ಪಾಟೀಲ, ಯಲ್ಲಪ್ಪಗೌಡ ಪಾಟೀಲ, ಗೀರಿಶ ಪಾಟೀಲ, ಗೋವಿಂದ ದೇವರಡ್ಡಿ, ನಾರಾಯಣ ಪಾಟೀಲ, ಸದಾನಂದ ಪಾಟೀಲ, ರಮೇಶ ಪಾಟೀಲ, ಕಿಟ್ಟು ತೋರಗಲ್ ಇತರರಿದ್ದರು.