ಭಗತ್ ಸಿಂಗ್ ರವರ 94ನೇ ಹುತಾತ್ಮ ದಿನ ಭಾವಚಿತ್ರಕ್ಕೆ ಮಾಲಾರೆ್ಣ
ಬಳ್ಳಾರಿ 24 : ಐಯುಟಿಯುಸಿ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಶಹೀದ್ ಭಗತ್ ಸಿಂಗ್ ರವರ 94ನೇ ಹುತಾತ್ಮ ದಿನವನ್ನು ಸಂಘಟನೆಯ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಭಗತ್ ಸಿಂಗ್ ರವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಲಾಯಿತು. ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಮಾತನಾಡುತ್ತಾ"ಭಗತ್ ಸಿಂಗ್ ರಾಜಿ ರಹಿತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಶಾಂತಿ ಮಂತ್ರದಿಂದಾಗಲಿ, ಮನವಿ- ಸಂಧಾನಗಳಿಂದಾಗಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳನ್ನು ಮಣಿಸಲು ಸಾಧ್ಯವಿಲ್ಲ. ಬದಲಿಗೆ ಜನ ಸಮೂಹದ ಸಶಸ್ತ್ರ ಹೋರಾಟಗಳ ಮೂಲಕವೇ ಬ್ರಿಟಿಷರನ್ನ ತೊಲಗಿಸಲು ಸಾಧ್ಯ ಎಂದು ಅರಿತಿದ್ದರು. ಕೇವಲ ಬ್ರಿಟಿಷ್ ಅಧಿಪತ್ಯ ಕೊನೆಗಾಣಿಸುವುದಷ್ಟೇ ಅಲ್ಲ, ಬಂಡವಾಳಶಾಹಿ ವ್ಯವಸ್ಥೆಯನ್ನು ಸಹ ಕಿತ್ತೊಗೆದು, ಕಾರ್ಮಿಕ ರಾಜ್ಯ ಸ್ಥಾಪನೆ ಮಾಡಬೇಕೆನ್ನುವುದು ಅವರು ದೃಢವಾದ ವಿಚಾರವಾಗಿತ್ತು. ಆಗ ಮಾತ್ರ ಶೋಷಿತ ಜನರಿಗೆ ನೈಜ ಸ್ವಾತಂತ್ರ್ಯ ದೊರೆಯಲು ಸಾಧ್ಯ. ಅದಕ್ಕಾಗಿ ಕಾರ್ಮಿಕರು ಹಾಗೂ ರೈತರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಸಂಘಟಿಸಲು ಒತ್ತು ನೀಡಿದ್ದರು. ರಷ್ಯಾದ ಕಾರ್ಮಿಕ ಕ್ರಾಂತಿಯ ಮಹಾನ್ ನಾಯಕರಾದ ಲೆನಿನ್ ಅವರಿಂದ ಸ್ಪೂರ್ತಿ ಹೊಂದಿದ್ದರು. ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಲೆನಿನ್ ಅವರ ಸ್ಮರಣೆ ದಿನ ಇದ್ದಾಗ, ರಷ್ಯಾ ದೇಶಕ್ಕೆ ಟೆಲಿಗ್ರಾಂ ಮೂಲಕ ಸಂದೇಶವನ್ನು ಸಹ ಕಳುಹಿಸಿದ್ದರು. ನೇಣಿಗೆ ಹೋಗುವ ಮುನ್ನವೂ ಕೂಡ ಲೆನಿನ್ ಜೀವನದ ಕುರಿತು ಓದುತ್ತಿದ್ದರು. ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿವೆ" ಎಂದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡುತ್ತಾ "ಬಂಡವಾಳಶಾಹಿ ಶೋಷಣೆ ತೀವ್ರವಾಗಿ ಬೆಲೆ ಏರಿಕೆ, ನಿರುದ್ಯೋಗ, ಬಡತನ, ಹಣದುಬ್ಬರ ಮುಂತಾದ ಅನೇಕ ಸಂಕಷ್ಟಗಳು ಹೆಚ್ಚುತ್ತಿರುವಾಗ, ಸರ್ಕಾರಗಳು ಜನರನ್ನು ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಹೆಸರಲ್ಲಿ ಒಡೆಯುತ್ತಿರುವಾಗ, ಭಗತ್ ಸಿಂಗ್ ಅವರ ವಿಚಾರಗಳು ಅತ್ಯಂತ ಅವಶ್ಯಕವಾಗಿವೆ. ಈ ಮೂಲಕ ದುಡಿಯುವ ಜನರ ಹೋರಾಟಕ್ಕೆ ಇನ್ನಷ್ಟು ಸ್ಪೂರ್ತಿ ತುಂಬಬೇಕಿದೆ" ಎಂದರು. ವೇದಿಕೆಯ ಮೇಲೆ ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್, ಉಪಾಧ್ಯಕ್ಷರಾದ ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು. ಗಣಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ವಿಮ್ಸ್ ಗುತ್ತಿಗೆ ನೌಕರರು, ಹಾಸ್ಟೆಲ್ ಅಡಿಗೆಯವರು, ಸ್ಪಾಂಜ್ ಐರನ್ ಕಾರ್ಮಿಕರು ಇನ್ನಿತರ ಯುನಿಯನ್ ಮುಖಂಡರುಗಳು ಭಾಗವಹಿಸಿದ್ದರು.