ಲೋಕದರ್ಶನ ವರದಿ
ಶಿರಹಟ್ಟಿ 25: ಕಳೆದ 15 ತಿಂಗಳುಗಳಿಂದ 5 ವರ್ಷದೊಳಗಿನ ಪ್ರತಿಯೊಂದು ಮಕ್ಕಳಿಗೆ ಎ ಅನ್ನಾಂಗ ದ್ರಾವಣ ಕೊಡಿಸಬೇಕು. ಇದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಈ ಎ ಅನ್ನಾಂಗವನ್ನು ಮಕ್ಕಳಿಗೆ ತಪ್ಪದೇ ಹಾಕಿಸುವದರಿಂದ ಕಣ್ಣಿಗೆ ಯಾವುದೇ ರೀತಿಯ ತೊಂದರೆ ಬಾರದೇ ದೃಷ್ಠಿ ಆರೋಗ್ಯದಿಂದ ಇರಲು ಸಾಧ್ಯ ಎಂದು ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ರಷ್ಮಿ ಪಾಟೀಲ ಹೇಳಿದರು.
ಅವರು ಬೆಳ್ಳಟ್ಟಿ ಗ್ರಾಮದ ವಡ್ಡರಗೇರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಎ ಅನ್ನಾಂಗ ದ್ರಾವಣವನ್ನು ನೀಡುವ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಜಗತ್ತಿನಾದ್ಯಂತ 20 ಕೋಟಿಗೂ ಅಧಿಕ ಜನರು ಎ ಅನ್ನಾಂಗ, ಕಬ್ಬಿಣಾಂಶ ಹಾಗೂ ಇನ್ನಿತರ ಪೌಷ್ಠಿಕಾಂಶಗಳ ತೊಂದರೆಯನ್ನು ಅನುಭವಿಸುತ್ತಿದ್ದು ಅದರಲ್ಲಿ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಾಗಿದ್ದಾರೆ, ಇಲ್ಲಿಯವರೆಗೂ ಎ ಅನ್ನಾಂಗ ಹಾಗೂ ಪೌಷ್ಠಿಕಾಂಶಗಳ ಕೊರತೆಯಿಂದ ಅಂಧತ್ವ ಬರುತ್ತದೆ ಎಂದು ತಿಳಿಯಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಬೆಳಕಿಗೆ ಬಂದ ವಿಷಯ ಎ ಅನ್ನಾಂಗದ ಕೊರತೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸಿ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶೋಭಾ ತೆಗೂರ, ಮಂಜುಳಾ ಕಾಮತ್, ಶಾಂತಾ ಬಸವರಡ್ಡಿ, ಎನ್ ಎಮ್ ದೊಡ್ಡಮನಿ, ಅನ್ನಪೂರ್ಣ ಪಾಟೀಲ್ ಹಾಗೂ ಇನ್ನೂ ಅನೇಕ ಆಶಾ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.