ಅಭಿವೃದ್ಧಿ ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ ಸಂಸದ ತುಕಾರಾಂ

MP Tukaram promises to provide basic facilities along with development

ಅಭಿವೃದ್ಧಿ ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ ಸಂಸದ ತುಕಾರಾಂ 

ಕಂಪ್ಲಿ 16: ಕುಡುತಿನ ಪಟ್ಟಣದ ಪ್ರತಿಯೊಂದು ವಾರ್ಡಗಳಲ್ಲಿ ಜನತೆಗೆ ಸಮರ​‍್ಕವಾಗಿ ಕುಡಿಯುವ ನೀರು ಕಲ್ಪಿಸುವ ಹಿತದೃಷ್ಟಿಯಿಂದ ಸುಮಾರು 220 ಕೋಟಿ ಅನುದಾನ ಮಂಜೂರಾಗಿದ್ದು, ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಬಳ್ಳಾರಿ(ವಿಜಯನಗರ) ಲೋಕಸಭಾ ಕ್ಷೇತ್ರದ ಸಂಸದ ಈ.ತುಕಾರಾಂ ಹೇಳಿದರು.  ತಾಲೂಕು ಸಮೀಪದ ಇಲ್ಲಿನ ವೇಣಿವೀರಾಪುರ, ಏಳುಬೆಂಚಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ತುಕಾರಾಂ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ಒಂದು ಸಾವಿರ ಮನೆಗಳು ಮಂಜೂರಾಗಿದ್ದು, ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಪಟ್ಟಣದ ಊರು ದ್ವಾರ ಬಾಗಿಲು ನಿರ್ಮಾಣಕ್ಕೆ ಸುಮಾರು 50 ಲಕ್ಷ ಅನುದಾನ ಅನುಮೋದನೆಯಾಗಿದೆ. ಕುಡುತಿನ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿಗೆ ಸುಮಾರು 6.45 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್ ಆಗಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. 30 ಹಾಸಿಗೆವುಳ್ಳ ಆಸ್ಪತ್ರೆ ಅಭಿವೃದ್ಧಿ ಸೇರಿದಂತೆ ಪಟ್ಟಣಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. ಸಂದರ್ಭದಲ್ಲಿ ಮುಖಂಡರಾದ ನಾಗಲಿಂಗಪ್ಪ, ಪೂಜಾರಿ ದುರುಗಪ್ಪ, ಪರಶುರಾಮ, ಜಗದೀಶ, ನಾಗೇಶ, ಗಂಗಾಧರ ಸೇರಿದಂತೆ ಗ್ರಾಮಸ್ಥರು, ಕಾರ್ಯಕರ್ತರು ಪಾಲ್ಗೊಂಡಿದ್ದರು.  ಸ್ಥಳ ಪರೀಶೀಲನೆ : ಇಲ್ಲಿನ ಗೌತಮ್‌ನಗರದ ಸ್ಥಳಕ್ಕೆ ಸಂಸದ ಈ.ತುಕಾರಾಂ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಇವರು ಭೇಟಿ ನೀಡಿ, ಪರೀಶೀಲಿಸಿದರು. ನಂತರ ಸಂಸದ ತುಕಾರಾಂ ಮಾತನಾಡಿ, ಕುಡುತಿನಿ ಪಟ್ಟಣಕ್ಕೆ ಒಂದು ಸಾವಿರ ಮನೆಗಳು ಬಂದಿವೆ. ಆದ್ದರಿಂದ ಇಲ್ಲಿನ ಜಾಗ ಪರೀಶೀಲಿಸಿದ್ದು, ಇಲ್ಲಿ ಮನೆಗಳನ್ನು ಅರ್ಹ ಬಡವರಿಗೆ ಕಟ್ಟಿಸಿಕೊಡಲು ತೀರ್ಮಾನಿಸಲಾಗಿದೆ. ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ಈ ವೇಳೆ ತಹಶೀಲ್ದಾರ್ ಗುರುರಾಜ, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಇದ್ದರು.