ರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
ಹಾನಗಲ್ 06 :ಇಲ್ಲಿನ ನವನಗರದಲ್ಲಿ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಒಂದು ಸಾವಿರ ಮನೆಗಳಿಗೆ ಮೂಲಸೌಲಭ್ಯಗಳಾದ ಸಿಸಿ ರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ಹಾನಗಲ್ ನಗರಕ್ಕೆ ಮಳಗಿ ಧರ್ಮಾ ಜಲಾಶಯದಿಂದ ನೇರವಾಗಿ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು 35 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಹದಗೆಟ್ಟು ಸಂಚಾರಕ್ಕೆ ಅಡಚಣೆಯಾಗಿದ್ದ ಮುಖ್ಯರಸ್ತೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ನಗರೋತ್ಥಾನ 4 ನೇ ಹಂತದಲ್ಲಿ 8.50 ಕೋಟಿ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನಗರ ಪ್ರದೇಶದ ನಿವಾಸಿಗಳ ನೆಮ್ಮದಿಯ ಜೀವನಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ದೊರಕಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ಖುರ್ಷಿದ್ ಹುಲ್ಲತ್ತಿ, ಮಮತಾ ಆರೆಗೊಪ್ಪ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಸುರೇಶ ನಾಗಣ್ಣನವರ, ಶ್ರೀನಿವಾಸ ಭದ್ರಾವತಿ, ಪ್ರಸಾದ ಗೌಡ, ಮುಖ್ಯಾಧಿಕಾರಿ ಜಗದೀಶ ವೈ.ಕೆ., ರಾಜೂ ಗುಡಿ, ಉಮೇಶ ಮಾಳಗಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.