ಸದನದಲ್ಲಿ ನೂತನ ತಾಲೂಕಿಗಾಗಿ ಒತ್ತಾಯಿಸದ ಶಾಸಕ ಸಿದ್ದು ಸವದಿ
ಮಹಾಲಿಂಗಪುರ 19: ಬೆಳಗಾವಿ ಚಳಿಗಾಲ ಅಧಿವೇಶನ ಆರಂಭಗೊಂಡು 9 ದಿನಗಳು ಗತಿಸಿ ಹೋಗುತ್ತಿದ್ದರೂ ಮಹಾಲಿಂಗಪುರ ನೂತನ ತಾಲೂಕು ರಚನೆ ಕುರಿತು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಒಂದೇ ಒಂದು ಮಾತು ಎತ್ತದೆ ಉದಾಸೀನತೆ ತೋರಿರುವುದು ಈ ಭಾಗದ ಜನತೆಯ ಮತ್ತು ಹೋರಾಟಗಾರರ ಬೇಸರಕ್ಕೆ ಕಾರಣವಾಗಿದೆ.
ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ನಿರ್ಮಾಣವಾಗಿದೆ ಬೆಳಗಾವಿ ಸುವರ್ಣಸೌಧ. ಇವತ್ತು ಈ ಭಾಗದ ಅಭಿವೃದ್ಧಿ ಮತ್ತು ಕುಂದು ಕೊರತೆಗಳ ಲೆಕ್ಕ ಹಾಕಿ ಸರ್ಕಾರವನ್ನು ಪ್ರಶ್ನೆ ಮಾಡುವ ಮನಸ್ಸು ಉತ್ತರದ ಜನಪ್ರತಿನಿಧಿಗಳಿಗೆ ಇದ್ದಂತೆ ಕಾಣುತ್ತಿಲ್ಲ. ಬೇರೆ ಬೇರೆ ವಿಷಯಗಳ ಬಗೆಗೆಯೇ ಚರ್ಚೆ. ಸದನದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಸಮೀಪದ ಬನಹಟ್ಟಿ ಮತ್ತು ತೇರ್ದಾಳ ಪಟ್ಟಣಗಳ ಅಭಿವೃದ್ಧಿ ಬಗ್ಗೆ ಸದನದಲ್ಲಿ ಕಾಳಜಿ ವಹಿಸಿರುವುದು ಸ್ವಾಗತಾರ್ಹ.
ಆದರೆ 983 ದಿವಸಗಳಿಂದ ತಾಲೂಕಿಗಾಗಿ ನಿರಂತರ ಹೋರಾಟ ನಡೆಸಿಕ್ಕೊಂಡು ಬಂದಿರುವ ಮಹಾಲಿಂಗಪುರ ಹಾಗೂ ಹೋಬಳಿಯ ಜನರ ಹೋರಾಟ ಶಾಸಕರ ಗಮನಕ್ಕೆ ಬರಲೇ ಇಲ್ಲವೇ, ಈ ರೀತಿಯ ತಾರತಮ್ಯವೇಕೆ, ನಮಗಾಗುವ ತೊಂದರೆ, ಕೊರತೆ ಯಾರ ಮುಂದೆ ಹೇಳಬೇಕು. ಸುಧೀರ್ಘ ದಿವಸಗಳ ಹೋರಾಟ ಹುಡುಗರಾಟವೆ. ಎಲ್ಲ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಈ ಹೋರಾಟವನ್ನು ಓರೆಗಣ್ಣಿನಿಂದ ನೋಡಿ ಅಪಹಾಸ್ಯ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಜನರು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ.
ದಯವಿಟ್ಟು ಆ ರೀತಿ ಮಾಡಬೇಡಿ. ಮಹಾಲಿಂಗೇಶ್ವರರ ಈ ಪುಣ್ಯಭೂಮಿಯು ಶತ ಶತಮಾನಗಳ ಶ್ರೇಷ್ಠ ಇತಿಹಾಸ ಹೊಂದಿದ್ದು ಅಲ್ಲದೇ, ತಾಲೂಕಿಗೆ ಅಗತ್ಯವಿರುವ ಕಾನೂನು ಬದ್ಧ ದಾಖಲಾತಿಗಳೆಲ್ಲವನ್ನೂ ಕಂದಾಯ ಇಲಾಖೆಗೆ ಸಮಿತಿ ಒದಗಿಸಿದೆ. ಅದನ್ನಾದರೂ ನೋಡಿ ನೂತನ ತಾಲೂಕು ಘೋಷಣೆಗೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಸಹಕರಿಸಬೇಕು. ಈಗ ತಾಲೂಕಿಗಾಗಿ ಸಾಕಷ್ಟು ಕಾಲ ಕಾಯ್ದಿದ್ದಾಗಿದೆ ಇನ್ನು ಜನರನ್ನು ಕಾಯಿಸಬೇಡಿ. ಜನರ ಕೋಪಕ್ಕೆ ಗುರಿಯಾಗಬೇಡಿ. ಸವದಿ ಅವರೇ ಈ ಕ್ಷೇತ್ರದಿಂದ ತಾವು ನಾಲ್ಕು ಬಾರಿ ಆರಿಸಿ ಬಂದಿದ್ದಿರಿ ಜನ ನಿಮ್ಮ ಮೇಲೆ ಪ್ರೀತಿ ವಿಶ್ವಾಸ ಹೊಂದಿದ್ದಾರೆ.ಅದನ್ನು ಉಳಿಸಿಕ್ಕೊಂಡು ಹೋಗಿ ಜನರ ಋಣ ತೀರಿಸಿ.
ಈ ಹಿಂದೆ ಭಾಜಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಎರಡು ದಿವಸಗಳ ಮುಂಚಿತವಾಗಿ ಮಹಾಲಿಂಗಪುರ, ಬಂಕಾಪುರ, ಸಂಕೇಶ್ವರ, ಹನುಮಸಾಗರ, ಕೆಂಭಾವಿ, ಶಿವಮೊಗ್ಗ ಗ್ರಾಮೀಣ ತಾಲ್ಲೂಕು, ಈ ಪಟ್ಟಣಗಳನ್ನು ತಾಲೂಕು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂಬ ಕೈಬರಹ ಪತ್ರವನ್ನು ಕೆಲವು ಮುಖಂಡರು ಹೋರಾಟಗಾರರ ಕೈಗೆ ನೀಡಿ ಹೋರಾಟ ಸ್ಥಗಿತಗೊಳಿಸಲು ಕೇಳಿಕ್ಕೊಂಡರು. ಮುಖಂಡರಿಂದ ಪತ್ರದ ಸತ್ಯಾಸತ್ಯತೆ ಬಗ್ಗೆ ಸರಿಯಾಗಿ ಮನವರಿಕೆಯಾಗಲಿಲ್ಲ ಎನ್ನುವ ಕಾರಣ ಹೋರಾಟ ಮತ್ತೆ ಮುಂದುವರೆಯಿತು.