ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ರಾಜುಗೌಡ ಖಡಕ್ ಎಚ್ಚರಿಕೆ ಕೆಡಿಪಿ ಸಭೆ
ದೇವರಹಿಪ್ಪರಗಿ 12: ‘ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನಿಗಾ ವಹಿಸಬೇಕು’ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ಬುಧವಾರದಂದು ಜರುಗಿದ 2024-25ನೇ ಸಾಲಿನ 01 ತ್ರೈಮಾಸಿಕದ ಕೆ.ಡಿ.ಪಿ ಪ್ರಗತಿ ಪರೀಶೀಲನ ಸಭೆಯಲ್ಲಿ ಮಾತನಾಡಿದ ಅವರು,ವಿವಿಧ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿನಿತ್ಯ ನನ್ನ ಗಮನಕ್ಕೆ ತರುತ್ತಿದ್ದಾರೆ, ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದೀರಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದ ಹಾಗೆ ಕ್ರಮ ಕೈಗೊಳ್ಳಲು ಪಿಡಿಒ, ಇಒ, ಕೆಇಬಿ ಹಾಗೂ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ,ಕರ್ತವ್ಯ ನಿಷ್ಠೆ,ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕತೆ ಯಿಂದ ಕಾರ್ಯನಿರ್ವಹಿಸಿ ಎಂದು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರು ಏರುಧ್ವನಿಯಲ್ಲಿ ಅಧಿಕಾರಿಗಳ ವಿರುದ್ಧ ಗುಡುಗಿದರು.ಸಭೆಯಲ್ಲಿ ತೋಟಗಾರಿಕೆ, ಕೃಷಿ , ಪಂಚಾಯತ್ ರಾಜ್,ಅರಣ್ಯ, ಆರೋಗ್ಯ, ಅಕ್ಷರ ದಾಸೋಹ, ಕೆ.ಆರ್.ಐ.ಡಿ. ಎಲ್, ರೇಷ್ಮೆ, ಭೂಮಾಪನ, ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಹೆಸ್ಕಾಂ, ಆಹಾರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ತಮ್ಮ-ತಮ್ಮ ಇಲಾಖೆಯ ಪ್ರಗತಿ ವಿವರವನ್ನು ಮಂಡಿಸಿದರು.ಸಂದರ್ಭದಲ್ಲಿ ಕೆಡಿಪಿ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.ವೇದಿಕೆಯ ಮೇಲೆ ಜಿ.ಪಂ ಯೋಜನಾ ಅಧಿಕಾರಿ ನಿಂಗಪ್ಪ ಗೋಠೆ,ತಹಶೀಲ್ದಾರ್ ಪ್ರಕಾಶ ಸಿಂದಗಿ, ಬಾಗೇವಾಡಿ ತಹಶೀಲ್ದಾರ್ ಎಸ್.ಎಸ್. ಸೋಮನಕಟ್ಟಿ, ತಾಳಿಕೋಟಿ ತಹಶೀಲ್ದಾರ್ ಕೀರ್ತಿ ಚಾಲಕ, ತಾ.ಪಂ ಇಒ ಭಾರತಿ ಚೆಲುವಯ್ಯ, ಪ್ರಕಾಶ ದೇಸಾಯಿ,ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಕೆಡಿಪಿ ಸದಸ್ಯರುಗಳಾದ ಪ್ರಕಾಶ ಗುಡಿಮನಿ,ಮುರ್ತೂಜಾ ತಾಂಬೋಳಿ,ಸಂತೋಷ ಸಾಸಟ್ಟಿ, ಶಂಕ್ರ್ಪ ಬಂಗಾರಗುಂಡ, ಭೀಮರಾಯ ಬುಳ್ಳಾ ಸೇರಿದಂತೆ ನಾಲ್ಕು ತಾಲೂಕಿನ ತಾಲೂಕು ಮಟ್ಟದ ಅಧಿಕಾರಿಗಳು,ತಾ.ಪಂ ಸಿಬ್ಬಂದಿ ವರ್ಗ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಸರ್ಕಾರಿ ಯೋಜನೆಗಳನ್ನು ಸಮರ್ಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಾವುದೇ ಅನುದಾನ ವಾಪಸ್ ಹೋಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು.