ಪ್ರಕರಣದ ನ್ಯಾಯಾಂಗ ತನಿಖೆಗೆ ಶಾಸಕ ಹಿಟ್ನಾಳ್ ಆಗ್ರಹ

ಲೋಕದರ್ಶನ ವರದಿ

ಕೊಪ್ಪಳ 21: ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಾಂಬೆ ಮೂಲದ ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಘವೇಂದ್ರ ಹಿಟ್ನಾಳ್ ಆಗ್ರಹಿಸಿದ್ದಾರೆ.

 ಅವರು ಸುದ್ದಿಗಾರರೊಂದಿಗೆ ಮಾತನಾಡಿ ಲಾಕ್ಡೌನ್ ಸಂದರ್ಭದಲ್ಲಿ ಬೇರೆ ರಾಜ್ಯದಿಂದ ಇಲ್ಲಿಗೆ ಜನರು ಬರುತ್ತಾರೆಂದರೆ ಇದಕ್ಕೆ ಪೊಲೀಸ್ ಅಧಿಕಾರಿಗಳ ಬೆಂಬಲ ಇರಬೇಕು. ಈ ಸಂಬಂಧ ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಈ ಪ್ರಕರಣವನ್ನು ನಮ್ಮ ಪಕ್ಷದ ನಾಯಕರ ಗಮನಕ್ಕೆ ಕೂಡಾ ತರುತ್ತೇನೆ. ಸುಮ್ಮನೆ ಬಿಡಲು ಇದು ಸಣ್ಣ ವಿಷಯವಲ್ಲ. ಈ ಕುರಿತಂತೆ ನ್ಯಾಯಾಂಗ ತನಿಖೆಯಾಗಲಿ. ಯಾರು ತಪ್ಪಿತಸ್ಥರು ಎಂಬ ವಿಷಯ ಎಲ್ಲರಿಗೂ ತಿಳಿಯಲಿ. ಇಂತವರಿಗೆ ಯಾವುದೇ ಪಕ್ಷದ ಮುಖಂಡರೂ ಬೆಂಬಲ ನೀಡುವುದಿಲ್ಲ ಎಂದು  ಅವರು. ಮಾಚರ್್ 19ರಂದು ಧಾರವಾಡದ ಕೊರೊನಾ ಸೋಂಕಿತ ವ್ಯಕ್ತಿ ಪ್ರಯಾಣಿಸಿದ್ದ ಬಸ್ನಲ್ಲೇ ಬಾಂಬೆ ಮೂಲದ ಮಹಿಳೆ ಕೂಡಾ ಪ್ರಯಾಣಿಸಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಮಹಿಳೆಯನ್ನು ಹುಬ್ಬಳ್ಳಿಯಲ್ಲಿ ಕ್ವಾರಂಟೈನ್ನಲ್ಲಿ ಇಡಲು ಸೂಚಿಸಿತ್ತು. ಆದರೆ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಮಹಿಳೆ ಹುಬ್ಬಳ್ಳಿಯಿಂದ ಕೊಪ್ಪಳದ ಭಾಗ್ಯನಗರಕ್ಕೆ ಬಂದು ಅಲ್ಲಿ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಮುಂಬೈಗೆ ವಾಪಸ್ ಹೋಗಲು ಪಾಸ್ ಕೊಡಿಸುತ್ತೇನೆ ಎಂದು ಆಕೆಯನ್ನು ಕೊಪ್ಪಳಕ್ಕೆ ಕರೆತಂದ ಗುರುಬಸವರಾಜ ಹೊಳಗುಂದಿ ಹಾಗೂ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಪ್ರಯಾಣಿಸಿದ ಬಾಂಬೆ ಮೂಲದ ಮಹಿಳೆ ಇಬ್ಬರ ಮೇಲೂ ಪ್ರಕರಣ ದಾಖಲಿಸಿದ್ದು ಈ ಬಗ್ಗೆ ತನಿಖೆ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್,  ಮಾಜಿ ಜಿ.ಪಂ ಅಧ್ಯಕ್ಷರುಗಳಾದ ಎಸ್.ಬಿ ನಾಗರಳ್ಳಿ, ರಾಜಶೇಖರ ಕೆ ಹಿಟ್ನಾಳ,ಜುಲ್ಲುಸಾಬ ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಧಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಾಷಕಾಟನ್,ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಹಿರಿಯ ಸದಸ್ಯ ಅಮ್ಜದ್ ಪಟೇಲ್,ಕೃಷ್ಣ ಇಟ್ಟಂಗಿ, ನಗರಸಭೆ ಸದಸ್ಯರಾದ  ಅಕ್ಬರ್ ಪಲ್ಟನ್, ಅಜೀಮ್ ಅತ್ತಾರ್, ಪ್ರಸನ್ನ ಗಡಾದ, ಮಾಜಿ ನಗರ ಸಭೆ ಸದಸ್ಯ ಮಾನ್ವಿ ಪಾಷಾ, ಮಾಧ್ಯಮ ವಕ್ತಾರ  ಕುರಗೋಡ ರವಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.