ಶಾಸಕ ಹಿಟ್ನಾಳ್ ಬೆಂಬಲಿಗನ ಹಲ್ಲೆ ಪ್ರಕರಣ: ಭೀತಿಗೊಳಗಾದ ಮಹಿಳೆಯರಿಂದ ಎಸ್ಪಿ ಭೇಟಿ

ಲೋಕದರ್ಶನ ವರದಿ

ಕೊಪ್ಪಳ 03: ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಆಪ್ತ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ರತ್ನಮ್ಮರವರ ಪತಿಯಾದ ಭರಮಪ್ಪ ನಗರ (ಹಟ್ಟಿ) ಎಂಬುವರು ಗ್ರಾಮದ ಅಮಾಯಕರ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಹಟ್ಟಿ ಗ್ರಾಮದ ಮಹಿಳೆಯರು  ಕೊಪ್ಪಳದ ಎಸ್ಪಿ ಕಚೇರಿ ಆವರಣದಲ್ಲಿ ನಮಗೆ ನ್ಯಾಯ ಕೊಡಿಸಿ ಅಂತ ಕಣ್ಣೀರಿಟ್ಟು ಪೊಲೀಸ್ ಅಧಿಕಾರಿಗಳ ಕಾಲಿಗೆ ಬಿದ್ದ ಪ್ರಸಂಗ ನಡೆದಿದೆ.

ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಅಳವಂಡಿ ಜಿ.ಪಂ ಸದಸ್ಯೆ ರತ್ನವ್ವ ನಗರ ಹಾಗೂ ಪತಿ ಗ್ರಾಮ ಪಂಚಾಯತ್ ಸದಸ್ಯ ಭರಮಪ್ಪ ನಗರ ಇಬ್ಬರೂ ಅದೇ ಗ್ರಾಮದ ಪಾಂಡು ಬೋರಿನ್   ಎಂಬುತನ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ದೌರ್ಜನ್ಯ ನಡೆಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. 

ಭರಮಪ್ಪ ನಗರ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ರವರ  ಆಪ್ತ ಎರಡು ದಿನಗಳ ಹಿಂದೆಯಷ್ಟೇ ಕ್ಷುಲ್ಲಕ ಕಾರಣಕ್ಕೆ ಭೀಮಣ್ಣ ಬೋರಿನ್ ಎಂಬುವವರ ಮನೆ ಮೇಲೆ ಭರಮಪ್ಪ ನಗರ ಹಾಗೂ ಸಹಚರರು ದಾಳಿ ನಡೆಸಿದ್ದರಂತೆ. ಭರಮಪ್ಪ ಹಾಗು ಭೀಮಣ್ಣ ಒಂದೇ ಸಮುದಾಯದವರಾಗಿದ್ದು, ಅಲ್ಲದೇ ಅಪ್ಪಟ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಬೆಂಬಲಿಗರು. ಇನ್ನು ಭೀಮಣ್ಣ ಬೋರಿನ್ ಅವರ ತಮ್ಮ ಪಾಂಡು ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಗುರತಿಸಿಕೊಳ್ಳತ್ತಿದ್ದು, ಹಟ್ಟಿ ಗ್ರಾಮದಲ್ಲಿ ಭರಮಪ್ಪನ ಮಾತಿಗೆ ಬೆಲೆ ಕೊಡುತ್ತಿಲ್ಲ ಅನ್ನೋ ಕಾರಣಕ್ಕೆ ಭರಮಪ್ಪ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಭರಮಪ್ಪ ಮತ್ತೆ ಗುರುವಾರ ತಡರಾತ್ರಿ ಮತ್ತೆ ಭೀಮಣ್ಣ ಬೋರಿನ್ ಅವರ ಬೆಂಬಲಿಗರ ಮೇಲೆ ದೊಣ್ಣೆ, ಲಾಂಗು ಹಿಡಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ ಪಾಂಡು ಬೋರಿನ್, ಪಾಂಡು ಗೌಡ್ರು, ವೀರಪ್ಪ ತಳಕಲ್, ಹನುಮಪ್ಪ ತಳಕಲ್, ಯಲ್ಲಪ್ಪ ತಳಕಲ್, ವೀರುಪಾಕ್ಷಗೌಡ್ರ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಕೆಲವರು ಗದಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇನ್ನು ಕೆಲವರು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಟ್ಟಿ ಗ್ರಾಮಕ್ಕೆ ಅಳವಂಡಿ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಹಲ್ಲೆ ನಡೆದ ಹಿನ್ನೆಲೆ ಭೀಮಣ್ಣ ಬೋರಿನ್ ಮತ್ತು ಪಾಂಡು ಬೋರಿನ್ ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿ ಕೆಲವರನ್ನು ಬಂಧಿಸಲಾಗಿದೆ, ಪ್ರತಿಯಾಗಿ ಭರಮಪ್ಪ ಕೂಡ ಕೌಂಟರ್ ಕೇಸ್ ಹಾಕಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಪಾಂಡು ಬೋರಿನ್ ಪತ್ನಿ ಸೇರಿದಂತೆ ಹಲವು ಮಹಿಳೆಯರು ಭೀತಿಗೊಳಗಾಗಿ, ನಮಗೆ ನ್ಯಾಯಾ ಕೊಡಿ ಅಂತ ಪೊಲೀಸ್ ಅಧಿಕಾರಿಯೊಬ್ಬರ ಕಾಲು ಬಿದ್ದು ಕಣ್ಣೀರಿಡುತ್ತಿದ್ದರು. ಪೊಲೀಸರು ಎಷ್ಟೇ ಸಮಾಧಾನ ಮಾಡಿದರೂ, ಎಸ್ಪಿ ಕಚೇರಿ ದ್ವಾರದ ಮುಂದೆ ಕುಳಿತು ನ್ಯಾಯಾ ಕೊಡಿಸಿ ಹಾಗೂ ಹಲ್ಲೆ ಮಾಡಿದ ಭರಮಪ್ಪನನ್ನು ಬಂಧಿಸಿ ಅಂತ ಒತ್ತಾಯಿಸಿದರು. ಕೊನೆಗೆ ಎಸ್ಪಿ ರೇಣುಕಾ ಸುಕುಮಾರ ಅವರು ಬಂದು ಮಹಿಳೆಯರಿಗೆ ತಿಳಿಹೇಳಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಸದ್ಯ ತಲೆ ಮರೆಸಿಕೊಂಡಿರುವ ಭರಮಪ್ಪ ನಗರ ಈ ಪ್ರಕರಣದಿಂದ ಬಚಾವಾಗಲು ಏನೆಲ್ಲ ಕುತಂತ್ರ ಮಾಡಲು ಸಾಧ್ಯ ವಿದಯೋ ಅವೆಲ್ಲವನ್ನು ಪೂರ್ವಯೋಜಿತವಾಗಿ ಮಾಡಲು ಹೊರಟಿದ್ದಾರೆ. ಅಳವಂಡಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಭರಮಪ್ಪ ನ ದಬ್ಬಾಳಿಕೆ ಹೆಚ್ಚಾಗಿದೆ ಎಂದು ನೊಂದ ಗ್ರಾಮಸ್ಥರು ದೂರಿದ್ದಾರೆ. ಒಟ್ಟಾರೆ ಸದರಿ ಪ್ರಕರಣದಲ್ಲಿ ಅಮಾಯಕ ಗ್ರಾಮಸ್ಥರಿಗೆ ನ್ಯಾಯ ಸಿಗುತ್ತದೆಯೋ ಅಥವಾ ರಾಜಕೀಯ ಮೇಲಾಗಿ ಪ್ರಕರಣ ಹಳ್ಳ ಹಿಡಿಯುತ್ತದಯೋ ಎಂಬುದು ಕಾದು ನೋಡಬೇಕಾಗಿದೆ.