ನಿವೃತ್ತ ನೌಕರರ ಸಂಘಕ್ಕೆ ನಿವೇಶನ ಕಲ್ಪಿಸುವ ಭರವಸೆ ನೀಡಿದ ಶಾಸಕ ಗಣೇಶ

MLA Ganesha promised to provide a site for the retired employees' association

ನಿವೃತ್ತ ನೌಕರರ ಸಂಘಕ್ಕೆ ನಿವೇಶನ ಕಲ್ಪಿಸುವ ಭರವಸೆ ನೀಡಿದ ಶಾಸಕ ಗಣೇಶ 

ಕಂಪ್ಲಿ 13: ಹಲವು ವರ್ಷ ಸರ್ಕಾರಿ ಕರ್ತವ್ಯದಲ್ಲಿದ್ದು, ಜನರ ಸೇವೆ ಮಾಡಿ, ನಂತರ ನಿವೃತ್ತಿ ಹೊಂದಿದ ನೌಕರರ ಬದುಕು ಕಷ್ಟಕರವಾಗಿದ್ದು, ಇಂತಹ ನೌಕರರ ಬದುಕಿಗೆ ಪ್ರತಿಯೊಬ್ಬರು ಆಸರೆಯಾಗಬೇಕು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.  ಪಟ್ಟಣದ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಗುರುವಾರ ಆಯೋಜಿಸಿದ್ದ 6ನೇ ವಾರ್ಷಿಕ ಸಮಾವೇಶ ಹಾಗೂ 70 ವರ್ಷ ಮೇಲ್ಪಟ್ಟ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ, ಜೀವನ ಉತ್ತಮವಾಗಿರುತ್ತದೆ. ಮಕ್ಕಳು ಹಿರಿಯರನ್ನು ಗೌರವದಿಂದ ಕಾಣುವ ಜೊತೆಗೆ ಜೀವನದುದ್ದಕ್ಕೂ ಪೋಷಕರ ಪಾಲನೆ ಪೋಷಣೆ ಮಾಡಬೇಕು. ನಿವೃತ್ತ ನೌಕರರ ಸಂಘಕ್ಕೆ ನಿವೇಶ ಕಲ್ಪಿಸುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.  ನಂತರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್‌.ಗಂಗಾಧರಯ್ಯ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು ತನ್ನ ಬೇಡಿಕೆಗಳಿಗೆ ಸಂಬಂಧಪಟ್ಟಂತೆ 7ನೇ ವೇತನ ಆಯೋಗವು ತನ್ನ ವರದಿಯಲ್ಲಿ “ನಗದು ರಹಿತ ಆರೋಗ್ಯ-ಭಾಗ್ಯ” ಯೋಜನೆ ಹಾಗೂ “ಸಂಧ್ಯಾ ಕಿರಣ" ಯೋಜನೆಯನ್ನು ಅನುಷ್ಟಾನ ಮಾಡಬೇಕು. 70 ವರ್ಷದಿಂದ 80 ವರ್ಷದೊಳಗೆ ವಯೋಮೀತಿ ಮೀರಿದ ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಶೇ.10 ರಷ್ಟು ಮೂಲ ಪಿಂಚಣಿಯಲ್ಲಿ ಆರ್ಥಿಕ ಸೌಲಭ್ಯ ಒದಗಿಸಬೇಕು. ಪಿಂಚಣಿದಾರರಿಗೆ ಬರಬೇಕಾದ ಆರ್ಥಿಕ ಸೌಲಭ್ಯ ನೀಡಬೇಕಾದ ಸರ್ಕಾರ ನಿರ್ಲಕ್ಷ್ಯಿಸುತ್ತಿದೆ. ಆದ್ದರಿಂದ ರಾಜ್ಯ ಮಟ್ಟದ ಸಮಾವೇಶದ ಮೂಲಕ ದೊಡ್ಡ ಮಟ್ಟದಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು. ನಂತರ ನಿವೃತ್ತ ನೌಕರರಾದ ಬಿ.ವೀರಣ್ಣ, ವೀರಣ್ಣ ಪ್ರಭಣ್ಣ ಆಲೂರು, ಸಿ.ಗಣಪತಿ, ಸಂಗಪ್ಪ ಬಸಪ್ಪ ಬಲದಿನ್ನಿ, ಬಿ.ಶ್ರೀರಾಮುಲು, ಜಿ.ಆಂಜಿನೇಯಲು, ಬಿ.ಕೆ.ನೀಲಕಂಠರಾವು, ಅಬ್ದುಲ್ ರಹೀಂ, ವಿ.ನಾರಾಯಣರೆಡ್ಡಿ, ಟಿ.ಹೆಚ್‌.ಯೋಗಪ್ಪ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇಲ್ಲಿನ ಸಮಾವೇಶದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ, ಪುರಸಭೆ ಸದಸ್ಯ ಎಸ್‌.ಎಂ.ನಾಗರಾಜಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಶಶಿಧರ್, ಖಜಾಂಚಿ ಬಿ.ಬೆಟ್ಟಪ್ಪ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಡಿ.ವಿ.ಸುಬ್ಬಾರಾವ್, ಜಿ.ವಿ.ಸತ್ಯನಾರಾಯಣ, ಡಿ.ಮೌನೇಶ, ಎಸ್‌.ಜಿ.ಚಿತ್ರಗಾರ, ಷಣ್ಮುಕಪ್ಪ, ಹಿರೇಮಠ ಜಗನ್ನಾಥ ಸೇರಿದಂತೆ ನಿವೃತ್ತ ನೌಕರರು ಪಾಲ್ಗೊಂಡಿದ್ದರು.