ಹುಬ್ಬಳ್ಳಿ 23: ಸಮಾಜ ಕಲ್ಯಾಣವನ್ನೆ ಉಸಿರಾಗಿಸಿಕೊಂಡಿದ್ದ ತುಮಕೂರ ಸಿದ್ಧಗಂಗಾಮಠದ ಲಿಂ. ಡಾ. ಶಿವಕುಮಾರ ಸ್ವಾಮಿಜಿಯವರ ಶ್ರೀವಾಣಿ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಗ್ರಂಥಪಾಲಕ, ಚಿಂತಕ ಬಿ.ಎಸ್.ಮಾಳವಾಡ ಹೇಳಿದರು.
ಅವರು ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ರಾಜಧಾನಿ ಕಾಲನಿಯ ಗಣೇಶ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ತ್ರೀವಿಧ ದಾಸೋಹಿ ತುಮಕೂರ ಸಿದ್ಧಗಂಗಾಮಠದ ಲಿಂ. ಡಾ. ಶಿವಕುಮಾರ ಸ್ವಾಮಿಜಿಯವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಮಕೂರ ಸಿದ್ಧಗಂಗಾಮಠ ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಮತ್ತು ಆತ್ಮವಿಶ್ವಾಸ ಮೂಡಿಸುತ್ತದೆ. ಪೂಜ್ಯರು ಸೇವೆಗಳಿಗೆ ಹೊಸ ಭಾಷ್ಯ ನೀಡಿದ್ದಾರೆ. ಕಾಯಕ, ದಾಸೋಹ, ಶಿವಯೋಗದ ಮಹತ್ವವನ್ನು ಎಲ್ಲರಲ್ಲಿ ಸದಾ ಜಾಗೃತಿಯನ್ನುಂಟು ಮಾಡಿದ ಮಹಾತ್ಮರು. ವಿದ್ಯಾರ್ಥಿ ಗಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದ ಪೂಜ್ಯರು ಸದಾ ಸ್ಮರಣಿಯರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಮಾತನಾಡಿ ಪೂಜ್ಯರು ಕಾಲವನ್ನೇ ಗೆದ್ದ ಶರಣರು. ಪ್ರಶಸ್ತಿಗಳಿಗೆ ಗೌರವ ತಂದು ಕೊಟ್ಟಿದ್ದಾರೆ. ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಪೂಜ್ಯರು ಸಮಾಜಕ್ಕೆ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಸಮಷ್ಟಿ ಕಲ್ಯಾಣ ಬಯಸಿದ ಪೂಜ್ಯರ ಸಂದೇಶಗಳನ್ನು ಪಾಲಿಸಬೇಕು ಎಂದರು.
ಲೇಖಕಿ ಶಾಂತಾ ಬಸವರಾಜ, ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ರಾಜಧಾನಿ ಕಾಲನಿಯ ಗೌರವಾಧ್ಯಕ್ಷ ಎಂ.ಎ.ಹಿರೇಮಠ, ಪೂಜ್ಯರ ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು.
ರಾಜೇಶ್ವರಿ ಮಾಲಿಪಾಟೀಲ ಪ್ರಾರ್ಥಿ ಸಿದರು. ಎನ್.ಬಿ.ಬೆಳ್ಳಿಗಟ್ಟಿ ಸ್ವಾಗತಿಸಿದರು. ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ನಿರೂಪಿಸಿದರು. ನಿವೃತ್ ಪ್ರಾಚಾರ್ಯ ಪ್ರೊ ಎಸ್.ಎಂ.ಸಾತ್ಮಾರ ವಂದಿಸಿದರು. ಲಿಂ. ಡಾ. ಶಿವಕುಮಾರ ಸ್ವಾಮಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ರಾಜಧಾನಿ ಕಾಲನಿಯ ಅಧ್ಯಕ್ಷ ಜಿ.ಎಲ್.ಹಬೀಬ, ಬಿ.ವಿ.ಅಂಗಡಿ, ಆರ್.ಸಿ.ಹಲಗತ್ತಿ, ಪ್ರೊ ವಿ.ಬಿ.ಮಾಗನೂರ, ಬಿ.ವಿ.ಹೊಸಕೇರಿ, ಚನ್ನಬಸಪ್ಪ ಜಿ. ಶೆಟ್ಟರ, ವೀರಣ್ಣ ಬಬ್ಲಿ, ಡಾ. ಸರ್ವಮಂಗಳಾ ಕುದರಿ, ಸಿ.ಜಿ.ಕುದರಿ, ಆನಂದ ಘಟಪನದಿ, ಪ್ರೊಬಸ್ ಕ್ಲಬ್ನ ಹಿರಿಯ ನಾಗರಿಕರು, ಕಾಲನಿಯ ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಭಾಗವಹಿಸಿದ್ದರು.