ಭಾರತೀಯರೆಲ್ಲರೂ ಒಂದು ಎಂಬ ಭಾವನೆ ಇರಲಿ; ಶಿವಾನಂದ ಪಾಟೀಲರು
ತಾಳಿಕೋಟಿ, 23; ಎಲ್ಲ ಜಾತಿ ಧರ್ಮಗಳನ್ನು ಒಳಗೊಂಡ ವಿಶ್ವ ಶ್ರೇಷ್ಠ ದೇಶ ಭಾರತವಾಗಿದೆ ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ನಮ್ಮ ಜಾತಿ ಧರ್ಮ ಭಾಷೆಗಳು ಬೇರೆಯಾಗಿದ್ದರು ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಸುಭದ್ರ ಭಾರತದ ನಿರ್ಮಾಣಕ್ಕಾಗಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಸಕ್ಕರೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಹೇಳಿದರು. ಪಟ್ಟಣದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯವರು ಹಮ್ಮಿಕೊಂಡ ಮೂರು ದಿನಗಳ ಕುರಾನ್ ಪ್ರವಚನ ಕಾರ್ಯಕ್ರಮದ ಎರಡನೇ ದಿನದ ಪ್ರವಚನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಪ್ರವಚನಕಾರ ಮುಹಮ್ಮದ್ ಕುಂಞಿ ಅವರು ಸುಭದ್ರ ಕುಟುಂಬ ಸದೃಢ ಸಮಾಜದ ವಿಷಯದ ಮೇಲೆ ಪ್ರವಚನ ನೀಡಿ ಒಂದು ಆರೋಗ್ಯಪೂರ್ಣ ಸಮಾಜ ಹಾಗೂ ಸುಭದ್ರ ರಾಷ್ಟ್ರದ ನಿರ್ಮಾಣದಲ್ಲಿ ಕುಟುಂಬಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ ಆದರೆ ಇಂದು ನಮ್ಮ ಕುಟುಂಬ ಸಂಬಂಧಗಳು ಶಿಥಿಲಗೊಳ್ಳುತ್ತಿವೆ, ಹೆತ್ತವರನ್ನು ವೃದ್ರಾಶ್ರಮಗಳಿಗೆ ಅಟ್ಟುವ ಅತ್ಯಂತ ಅಮಾನವೀಯ ಕೆಲಸ ನಡೆಯುತ್ತಿವೆ ಕುಟುಂಬ ಸಂಬಂಧಗಳನ್ನು ರಕ್ಷಿಸಲು ನಾವೆಲ್ಲರೂ ಹೆಚ್ಚು ಆಸಕ್ತಿ ವಹಿಸ ಬೇಕಾಗಿದೆ ಎಂದ ಅವರು ನಮಗೆಲ್ಲರಿಗೂ ನಮ್ಮ ಮನೆ ಶಾಂತಿ ಸಮಾಧಾನದ ಕೇಂದ್ರ ವಾಗಬೇಕು, ಆದರೆ ಇಂದು ನಮ್ಮ ಮನೆಗಳು ಪೈಶಾಚಿಕ ಕೇಂದ್ರಗಳಾಗುತ್ತಿವೆ ಇದು ನೋವಿನ ಸಂಗತಿ ಮನೆಯಲ್ಲಿ ಶಾಂತಿ ಸಿಗದವನಿಗೆ ಜಗತ್ತಿನ ಯಾವ ಸ್ಥಳದಲ್ಲಿಯೂ ಶಾಂತಿ ಸಿಗುವುದಿಲ್ಲ, ಕುರಾನ್ ಕುಟುಂಬ ಸಂಬಂಧಗಳ ಕುರಿತು ಸಮಗ್ರ ಮಾರ್ಗದರ್ಶನ ಮಾಡಿದೆ ಎಂದರು. ನಾವದಗೀಯ ಪೂಜ್ಯ ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಚಬನೂರಿನ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಶ್ರೀಗಳು ಹಾಗೂ ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ, ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ ಯಾಳಗಿ, ವಿ.ವಿ. ಸಂಘದ ಅಧ್ಯಕ್ಷ ವಿ.ಸಿ. ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಸಿದ್ದನಗೌಡ ಪಾಟೀಲ ನಾವದಗಿ, ವಿಜಯಸಿಂಗ್ ಹಜೇರಿ, ಕಾಶಿನಾಥ ಮುರಾಳ,ಡಾ.ರವಿ ಅಗರವಾಲ, ಡಾ.ನಜೀರ ಕೋಳ್ಯಾಳ, ಎಂ.ಕೆ. ಪಟ್ಟಣಶೆಟ್ಟಿ, ಅಂಬಾಜಿರಾವ್ ವಾಡಕರ್, ಪರಶುರಾಮ್ ತಂಗಡಗಿ, ಅರವಿಂದ್ ಹಂಚಾಟೆ, ಇಬ್ರಾಹಿಂ ಮನ್ಸೂರ್ ಮತ್ತಿತರರು ಇದ್ದರು. ಹಾಫೀಜ ಹುಸೇನ್ ಬಾಗವಾನ ಕುರಾನ್ ಪಠಿಸಿದರು, ಶೋಯಬ್ ಸ್ವಾಗತಿಸಿದರು. ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ನಿರೂಪಿಸಿ ವಂದಿಸಿದರು.