ಯುವ ಜನತೆ ನಿಶ್ಚಿತ ಗುರಿ, ಸ್ವತಿಂಕೆ ರೂಢಿಸಿಕೊಳ್ಳಲಿ: ಸಿಪಿಐ ವಿಶ್ವನಾಥ ಚೌಗಲಾ
ಚಿಕ್ಕೋಡಿ 13: ಯುವ ಜನತೆಗೆ ನಿಶ್ಚಿತ ಗುರಿ, ದೃಢ ನಂಬಿಕೆ, ಆತ್ಮ ವಿಶ್ವಾಸ, ಸ್ವತಿಂಕೆ ರೂಢಿಸಿಕೊಳ್ಳಬೇಕು ಹಾಗೂ ದೇಶಕ್ಕಾಗಿ, ಸಮಾಜಕ್ಕಾಗಿ ಯೋಚಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಿಪಿಐ ವಿಶ್ವನಾಥ ಚೌಗಲಾ ಹೇಳಿದರು.
ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಡಿ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೂ ಧರ್ಮದ ವೇದಾಂತ ಸಾರ, ಉಪನಿಷತ್, ಆಗಮಗಳು ಇಲ್ಲಿಯ ಶ್ರೇಷ್ಠ ಸಂಸ್ಕೃತಿಯ ಕುರಿತು ಜಗತ್ತಿಗೆ ಹೆಚ್ಚು ಪ್ರಖರವಾಗಿ ತಿಳಿಸಿಕೊಟ್ಟ ಮಹಾಪುರುಷ ಶ್ರೇಷ್ಠ ಸನ್ಯಾಸಿ ಸ್ವಾಮಿ ವಿವೇಕಾನಂದರು. ಭಾರತವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಮೂಢನಂಬಿಕೆ, ಅಂಧಶ್ರದ್ಧೆ, ಮೇಲು-ಕೀಳು, ಅನಕ್ಷರತೆ ಮುಂತಾದ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟಗಳನ್ನು ಮಾಡಿ, ಒಂದು ಕಾಲದಲ್ಲಿ ಭಾರತವನ್ನು ಹಾವಾಡಿಗರ ದೇಶ, ಮೂಢನಂಬಿಕೆಗಳ ದೇಶ ಎಂದು ಹೀಯಾಳಿಸಿದ ದೇಶಗಳಿಗೆ ಆಧ್ಯಾತ್ಮಿಕ ನಡೆಯ ಮೂಲಕ ಬೆಳಕನ್ನು ಚೆಲ್ಲಿ ದೇಶದ ಗೌರವನ್ನು ಜಗತ್ತಿನಾದ್ಯಾಂತ ಪಸರಿಸಿದ ಕೀರ್ತಿ ಹೆಚ್ಚಿಸಿದ ವಿವೇಕಾನಂದರಿಗೆ ಸಲ್ಲಿಸುತ್ತದೆ. ಜಗತ್ತಿನಲ್ಲಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತವಾಗಿದೆ. ಅಂತಹ ಯುವಕರು ದೇಶದ ಆಸ್ತಿಯಾಗಿದ್ದಾರೆ ಎಂದರು.
ಪ್ರಾಚಾರ್ಯ ಎಮ್.ಆರ್.ಭಾಗಾಯಿ ಅವರು ಮಾತನಾಡಿ ದೃಢ ಸಂಕಲ್ಪ, ಛಲ ಇದ್ದರೆ ಗುರಿ ತಲಪಲು ಸಾಧ್ಯ, ಏಕಾಗ್ರತೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅನಂತ ಶಕ್ತಿ, ಉತ್ಸಾಹ, ಧೈರ್ಯ, ತಾಳ್ಮೆ ಇದ್ದವರು ಸಾಧನೆ ಮಾಡುತ್ತಾರೆ ಎಂಬುದು ಸ್ವಾಮಿ ವಿವೇಕಾನಂದ ನಿಲುವಾಗಿತ್ತು ಎಂದರು.
ಉಪನ್ಯಾಸಕರಾದ ಎಸ್.ಎಮ್.ತೇಲಿ, ಎಸ್.ಎಮ್.ಕುಲಕರ್ಣಿ, ಎ.ಟಿ.ಬಾನೆ, ಸಂಜೀವ ಮಾನೆ, ಎ.ಡಿ.ದಾನೋಳೆ, ಕೆ.ವಿ.ಮಾಲಬನ್ನವರ, ಪ್ರತಿಭಾ ವಟ್ನಾಳ, ಆರ್.ಎ.ಪಾಟೀಲ ಇದ್ದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಯಂ ಸೇವಕರಾದ ಗಾಯತ್ರಿ ಪರಗೌಡ ನಿರೂಪಿಸಿದರು, ಪ್ರೀತಿ ಯಲ್ಲಾಯಿಗೋಳ ವಂದಿಸಿದರು.