ಲೇಖಕಿಯರು ತಮ್ಮ ಲೇಖನಿಯನ್ನು ಸಮಾಜಮುಖಿಯಾಗಿಸಲಿ: ಶೀಲಾ ಅಂಕೋಲಾ

ಬೆಳಗಾವಿ 18: ಸಮಾಜದ ಪ್ರಸ್ತುತ ಸಮಸ್ಯೆಗಳಿಗೆ ಲೇಖಕಿಯರು ಸ್ಪಂದಿಸುತ್ತ ತಮ್ಮ ಲೇಖನಿಯನ್ನು ಸಮಾಜಮುಖಿಯಾಗಿಸಬೇಕೆಂದು ಹಿರಿಯ ಸಾಹಿತಿ ಶೀಲಾ ಅಂಕೋಲಾ ಅವರು ಲೇಖಕಿಯರಿಗೆ ಕರೆ ನೀಡಿದರು.

      ಹುಕ್ಕೇರಿಯ ದಿ.ಲೀಲಾತಾಯಿ ನಾನಾಸಾಹೆಬ ದೇಶಪಾಂಡೆ ಅವರ 33ನೆಯ ಪುಣ್ಯತಿಥಿ ನಿಮಿತ್ತ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘವು ಆಯೋಜಿಸಿದ್ದ ಅವರ ಸ್ಮರಣೆಯ ದತ್ತಿನಿಧಿ ಕಾರ್ಯಕ್ರಮದಲ್ಲಿ

ಮುಖ್ಯ ಅತಿಥಿಯಾಗಿ ದಿ.ಲೀಲಾತಾಯಿ ದೇಶಪಾಂಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಾಹಿತಿಗಳು ಭಾವಜೀವಿಗಳಾದರೆ ಲೇಖಕಿಯರಂತೂ ಬಲು ಸೂಕ್ಷ್ಮಜೀವಿಗಳು. ಕೌಟುಂಬಿಕ ಸಮಸ್ಯೆಗಳಿಗೆ ಅವರು ಬಹುಬೇಗ ಸ್ಪಂದಿಸುತ್ತಾರೆ. ಅದರಂತೆ ಸಾಮಾಜಿಕ ಸಮಸ್ಯೆಗಳಿಗೂ ತೀವ್ರವಾಗಿ ಸ್ಪಂದಿಸಿ ತಮ್ಮ ಬರಹಗಳಲ್ಲಿ ಎದ್ದುತೋರಿಸಬೇಕೆಂದರು. ಹಲವು ಹಿರಿಯ ಕನ್ನಡ ಹಾಗೂ ಹಿಂದಿ ಸಾಹಿತಿಗಳು ಮತ್ತವರ ಕೃತಿಗಳನ್ನು ಉಲ್ಲೇಖಿಸಿದ ಅಂಕೋಲಾ ಅವರು ಇಂಥ ಮೌಲಿಕ ಕೃತಿಗಳನ್ನು ಓದಿ ಲೇಖಕಿಯರು ತಮ್ಮ ಬರಹವನ್ನು ಸತ್ವಯುತವಾಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

     ತಮ್ಮ ತಾಯಿಯ ಹೆಸರಲ್ಲಿ ದತ್ತಿನಿಧಿ ನೀಡುವ ಮೂಲಕ ಪತ್ರಕರ್ತ ಪ್ರಕಾಶ ದೇಶಪಾಂಡೆ ಅವರು ಜಿಲ್ಲೆಯ ಲೇಖಕಿಯರನ್ನು ಪ್ರೋತ್ಸಾಹಿಸಿದ್ದಾರೆಂದು ಶೀಲಾ ಅಂಕೋಲಾ ಅವರು ಪ್ರಶಂಶಿಸಿದರು.

      ತಮ್ಮ ತಾಯಿ ದಿ.ಲೀಲಾತಾಯಿ ದೇಶಪಾಂಡೆ ಅವರ ಹೆಸರಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘಕ್ಕೆ ಕಳೆದ ವರ್ಷದಿಂದ ದತ್ತಿನಿಧಿ ನೀಡುತ್ತಿರುವ ಹುಕ್ಕೇರಿಯ ಹಿರಿಯ ಪತ್ರಕರ್ತ,ಲೇಖಕ ಪ್ರಕಾಶ ದೇಶಪಾಂಡೆ ಅವರು ಮಾತನಾಡಿ ತಮ್ಮ ತಾಯಿಯ ಹಲವಾರು ಸಾಮಾಜಿಕ ಕಾರ್ಯಗಳನ್ನು ಹಾಗೂ ತಮ್ಮ ಮನೆಯಲ್ಲಿಯ ಕನ್ನಡ ಮರಾಠಿ ಮತ್ತು ಕಾಂಗ್ರೆಸ್- ಬಿಜೆಪಿ ಬಾಂಧವ್ಯವನ್ನು ವಿವರಿಸಿ ತಮ್ಮ ತಾಯಿ ಕನ್ನಡ ಮರಾಠಿ ಹಾಗೂ ಕಾಂಗ್ರೆಸ್ ಬಿಜೆಪಿಯ ಸಾಮರಸ್ಯತೆಯ ಪ್ರತೀಕವಾಗಿದ್ದಳೆಂದು ಸ್ಮರಿಸಿಕೊಂಡರು.20ವರ್ಷಗಳ ಹಿಂದೆ ಲೇಖಕಿ ಶ್ರೀಮತಿ ಆಶಾ ಕಡಟ್ಟಿ ಅವರು ಸ್ಥಾಪಿಸಿದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘವು ಇಂದು ಹೆಮ್ಮರವಾಗಿ ಬೆಳೆದು ದೇಶದ ವಿವಿಧ ಭಾಗಗಳಲ್ಲಿ ಜರುಗುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಲೇಖಕಿಯರು ಭಾಗವಹಿಸುತ್ತ ಜಿಲ್ಲೆಯ ಕನ್ನಡ ಸಾಹಿತ್ಯದ ರಾಯಭಾರಿಗಳಾಗಿ ದೇಶದ ಉದ್ದಗಲಕ್ಕೂ ಜಿಲ್ಲೆಯ ಸಾಹಿತ್ಯದ ಕಂಪನ್ನು ಪಸರಿಸಿದ್ದು ಅಭಿನಂದನೀಯವೆಂದು ದೇಶಪಾಂಡೆ ಅವರು ಜಿಲ್ಲಾ ಲೇಖಕಿಯರ ಸಂಘದ ಕಾರ್ಯ ಶ್ಲಾಘಿಸಿದರು.

      ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಅವರು ಸಂಘಕ್ಕೆ ಇನ್ನೂ ಹೆಚ್ಚಿನ ದತ್ತಿದಾನಿಗಳ ಅಗತ್ಯವಿದೆಂದು ಹೇಳಿ ತಮ್ಮ ಆತ್ಮೀಯರ ಹೆಸರಿನಲ್ಲಿ ದತ್ತಿನಿಧಿ ನೀಡುವ ಮೂಲಕ ಲೇಖಕಿಯರನ್ನು ಪ್ರೋತ್ಸಾಹಿಸಲು ಮನವಿಸಿದರು.

      ಹನ್ನೆರಡು ಕವಿಯತ್ರಿಯರು ತಮ್ಮ ವಿವಿಧ ಹನಿಗವನಗಳನ್ನು ಓದಿದರು. ಪೊಲೀಸ ಅಧಿಕಾರಿ ಮಹಾದೇವಿ ಕೌಜಲಗಿ ಅವರು ಓದಿದ ಹನಿಗವನಗಳು ಮೆಚ್ಚುಗೆ ಪಡೆದವು.

      ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬೆಳಗಾವಿಯ ನಾಡಹಬ್ಬದ ರೂವಾರಿ ಸಿ.ಕೆ.ಜೋರಾಪುರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

       ಸಂಘದ ಉಪಾಧ್ಯಕ್ಷೆ ಸುನಂದಾಮುಳೆ ಅವರು ಸ್ವಾಗತಿಸಿದರು.ಸಂಸ್ಥಾಪಕಿ ಆಶಾ ಕಡಪಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದಶರ್ಿ ಆಶಾ ಯಮಕನಮಡರ್ಿ ಅವರು

ನಿರೂಪಿಸಿ ತಾಯಿಯ ಕುರಿತು ಸುಶ್ರಾವ್ಯವಾಗಿ ಹಾಡಿ ವಂದಿಸಿದರು.