ಧಾರವಾಡ 9: ಅವಕಾಶಗಳು ಸಿಕ್ಕಾಗ ಅವುಗಳನ್ನು ಸದುಪಯೋಗ ಪಡಸಿಕೊಳ್ಳುವ ಗುಣವನ್ನು ಇಂದಿನ ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಎಂದು ಭಾರತ ಸರಕಾರದ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಶಿ ಅಭಿಪ್ರಾಯಪಟ್ಟರು.
ಅವರು ಕರ್ನಾ ಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ವತಿಯಿಂದ ಕವಿವಿಯ ಗಾಂಧಿ ಭವನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸತ್ವ, ಶಕ್ತಿ, ಶ್ರದ್ಧೆ ಮತ್ತು ಶ್ರಮದಂತಹ ಗುಣಗಳನ್ನು ಅಳವಡಸಿಕೊಂಡಾಗ ಮಾತ್ರ ನಾಯಕತ್ವದ ಗುಣಗಳು ತಾವಾಗಿಯೇ ಬರುತ್ತವೆ ಎಂದರು. ಪ್ರಸ್ತುತ ವಿದ್ಯಾರ್ಥಿಗಳನ್ನು ಸಮಾಜದ ಅಭಿವೃದ್ಧಿಗಾಗಿ ಸಜ್ಜುಗೊಳಿಸುವಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುವುದು ಬಹಳ ಅಗತ್ಯವಾಗಿದೆ ಎಂದ ಅವರು ಪ್ರಸ್ತುತ ಜಲಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನದಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಎನ್.ಎಸ್.ಎಸ್ದ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ನಗರದ ಕ್ಲಾಸಿಕ್ ಸ್ಟಡಿ ಸರ್ಕಲ್ ನಿರ್ದೇ ಶಕ ಲಕ್ಷ್ಮಣ ಉಪ್ಪಾರ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ನಾಯಕತ್ವದ ಶಿಬಿರಗಳಿಂದ ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾಗಿದ್ದು, ಇಂದು ಎಲ್ಲ ಕ್ಷೇತ್ರಗಳು ಬಹಳ ವೇಗವಾಗಿ ಬೆಳೆಯುತ್ತಿದ್ದು, ಅದರ ವೇಗಕ್ಕೆ ನಮ್ಮ ಕೌಶಲ್ಯ ಮತ್ತು ಸ್ಪರ್ಧೆ ಬಹಳ ಮುಖ್ಯ ಎಂದರು. ಪ್ರಸ್ತುತು ಸರಕಾರಿ ಮಟ್ಟದಲ್ಲಿ ಉದ್ಯೋಗ ಅವಕಾಶಗಳು ಬಹಳ ಇವೆ ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡುವ ಪ್ರವೃತ್ತಿಯನ್ನು ಬೆಳಸಿಕೊಂಡು ಯಶಸ್ಸು ಸಾಧಿಸಲು ಪ್ರಯತ್ನಿಸಿ ಎಂದರು.
ಕವಿವಿಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜನಾ ಅಧಿಕಾರಿ ಡಾ. ಎಂ.ಬಿ.ದಳಪತಿ ಮಾತನಾಡಿ ಕರ್ನಾ ಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ 200 ಎನ್.ಎಸ್.ಎಸ್ ಘಟಕಗಳು ಇದ್ದು, ಪ್ರಸ್ತುತ 21 ಸಾವಿರ ಎನ್.ಎಸ್.ಎಸ್. ಸ್ವಯಂ ಸೇವಕರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಒಂಬತ್ತು ಸಾವಿರ ಎನ್.ಎಸ್.ಎಸ್. ಸ್ವಯಂ ಸೇವಕರು ವಿವಿಧ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಘಟಕಗಳಿಗೆ ತಮ್ಮ ಹೆಸರನ್ನು ನೊಂದಣಿ ಮಾಡಿಸಿದ್ದು, ಯುವಕರಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಪ್ರಸ್ತುತ ಈ ನಾಯಕತ್ವ ಶಿಬಿರಕ್ಕೆ 21 ಸಾವಿರ ಸ್ವಯಂ ಸೇವಕರಲ್ಲಿ ಕೇವಲ 400 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದ ಅವರು ಜನವರಿ 7 ರಿಂದ 13ರ ವರಗೆ ನಡೆಯುವ ಈ ನಾಯಕತ್ವ ಶಿಬಿರದಲ್ಲಿ ಶ್ರಮದಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ, ಸಾಂಸ್ಕೃತಿ ಕಾರ್ಯಕ್ರಮ ಸೇರಿದಂತಹೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ಕ್ಲಾಸಿಕ್ ಸ್ಟಡಿ ಸರ್ಕಲ್ ವತಿಯಿಂದ ಟೀ ಶರ್ಟಗಳನ್ನು ಬಿಡುಗಡೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕವಿವಿಯ ಪ್ರಭಾರ ಕುಲಪತಿ ಪ್ರೊ. ಎ.ಎಸ್. ಶಿರಾಳಶೆಟ್ಟಿ ಮಾತನಾಡಿ ಸಾಮಾಜದ ಅಭಿವೃದ್ಧಿಗಾಗಿ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದ ಅವರು ಈ ಶಿಬಿರದಲ್ಲಿ ನಾಯಕತ್ವ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳಸುವಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಲ್ಲ ವಿದ್ಯಾರ್ಥಿಗಳು ಈ ಶಬಿರದ ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕವಿವಿಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜನಾ ಅಧಿಕಾರಿ ಡಾ. ಎಂ.ಬಿ.ದಳಪತಿ, ಕವಿವಿಯ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಆರ್.ಆರ್. ನಾಯಿಕ, ಪ್ರೊ. ರಾವಳದ ಪಾಟೀಲ್, ಡಾ. ಎಸ್.ಬಿ.ನ್ಯಾಮತಿ ಸೇರಿದಂತೆ ವಿವಿಧ ಕಾಲೇಜುಗಳಿಂದ ಆಗಮಿಸಿದ ಎನ್.ಎಸ್.ಎಸ್. ಅಧಿಕಾರಿಗಳು ವಿದ್ಯಾರ್ಥಿ ಸ್ವಯಂ ಸೇವಕರು ಇದ್ದರು.