ಓದುವುದೇ ಕಾಯಕವಾಗಲಿ: ಕವಿತಾ.ಪಿ.ಜಂಗವಾಡ
ಬಾಗಲಕೋಟೆ (03) : ವಿದ್ಯಾರ್ಥಿಗಳು ಜೀವನದಲ್ಲಿ ಗುರಿ, ಉದ್ದೇಶಗಳನ್ನು ಒಳಗೊಂಡಿರಬೇಕು. ಬದುಕಿನ ಉದ್ದಕ್ಕೂ ಅದರ ಸಿದ್ಧತೆ ಇರಬೇಕು. ನಮ್ಮ ಕಾಯಕ ಶ್ರಮ, ಪ್ರಯತ್ನವನ್ನು ಬಯಸುತ್ತದೆ. ಆ ಹಾದಿಯಲ್ಲಿ ಕೆಲಸ ಮಾಡಬೇಕು ಎಂದು ಬಾದಾಮಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕವಿತಾ.ಪಿ.ಜಂಗವಾಡ ಹೇಳಿದರು.
ನಗರದ ಬಿ ವ್ಹಿ ವ್ಹಿ ಸಂಘದ ಬಸವೇಶ್ವರ ಪದವಿ ಪೂರ್ವ ಕಲಾ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, "ಕಲಾ ಸಿಂಧು" ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ, ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಎನ್‌ಸಿ.ಸಿ, ಎನ್.ಎಸ್.ಎಸ್ ರೋವರ್ - ರೇಂಜರ್ ಚಟುವಟಿಕೆಯ ಸಮಾರೋಪ ಸಮಾರಂಭದಲ್ಲಿ "ಕಲಾ ಸಿಂಧು" ಪುಸ್ತಕ ಬಿಡುಗಡೆ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಓದುವ ಭಾವ ಬೆಳೆಯಬೇಕು. ಅಂಕಗಳಿಗಾಗಿ ಅಲ್ಲ, ಜ್ಞಾನ, ಕೌಶಲ್ಯಗಳಿಗಾಗಿ ಓದಬೇಕು. ಒತ್ತಡದ ಓದಿಗೆ ಪ್ರತಿಫಲ ದೊರೆಯುವುದಿಲ್ಲ. ನೀವು ಮಾಡುವ ಕೆಲಸ ಕಾಯಕವಾಗಿರಬೇಕು. ನಮ್ಮ ಅನ್ನವನ್ನು ನಾವೇ ದುಡಿದು ಪಡೆಯುತ್ತೇವೆ ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿರಬೇಕು ಎಂದರು.
ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕನಸನ್ನು ಸ್ವತಃ ತಮ್ಮ ಸತತ ಪ್ರಯತ್ನದಿಂದ ನನಸು ಮಾಡಿಕೊಳ್ಳುವಂತಿರಬೇಕು. ಶ್ರಮ ಪಟ್ಟು ಸೋತವರನ್ನು ಕಾಣುತ್ತೇವೆಯೇ ಹೊರತು, ಪ್ರಯತ್ನವಿಲ್ಲದೆ ಗೆಲುವು ಸಾಧಿಸಿದವರನ್ನು ಕಾಣಿವುದು ಶೂನ್ಯ. ಕಾಯಕದಲ್ಲಿ ಪೂಜ್ಯತೆಯನ್ನು ರೂಢಿಸಿಕೊಳ್ಳಬೇಕು. ವಿದ್ಯೆಯ ಜೊತೆಗೆ ಹಿರಿಯರು, ಶಿಕ್ಷಕರು, ತಂದೆ, ತಾಯಿಗಳಿಗೆ ಗೌರವ ಕೊಟ್ಟವರು ಉತ್ತಮ ಜೀವನ ನೀಗಿಸಬಲ್ಲರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್. ಆರ್. ಮೂಗನೂರಮಠ ಅವರು ಮಾತನಾಡಿ ಜ್ಞಾನ ಬೆಳಕನ್ನು ಮೂಡಿಸುತ್ತದೆ. ಬೆಳಕು ದಾರೀದೀಪವಾದಂತೆ ನಾವು ಮತ್ತೊಬ್ಬರಿಗೆ ದಾರೀದೀಪವಾಗಬೇಕು. ಅಜ್ಞಾನದಿಂದ ತುಂಬಿದ ಜಗತ್ತನ್ನು ನಾವಿಂದು ಕಾಣುತ್ತೇವೆ. ವಿದ್ಯಾರ್ಥಿಗಳು ಪಡೆದ ಜ್ಞಾನ, ಅಜ್ಞಾನದ ನಾಶವನ್ನು ಸೂಚಿಸುತ್ತದೆ.
ಪ್ರತಿಯೊಬ್ಬರಲ್ಲಿಯೂ ಬಿಂದು ಜ್ಞಾನ ಇರುತ್ತದೆ. ಮೊದಲು ನಿಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಜ್ಞಾನರೂಪಿಯಾಗಲು ಸಿದ್ಧರಾಗಿ, ಉತ್ತಮ ಅಭ್ಯಾಸದಿಂದ ಒಳ್ಳೆಯ ಫಲಿತಾಂಶ ಪಡೆದು ಭವಿಷ್ಯದಲ್ಲಿ ಉಜ್ವಲ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಯು.ಸಿ. ವಿಭಾಗದ ಸಂಚಾಲಕರಾದ ಡಾ.ಆರ್.ಎಮ್. ಬೆಣ್ಣೂರ, ಸಾಂಸ್ಕೃತಿಕ ಚಟುವಟಿಕೆ ಸಮಿತಿ ಸಂಯೋಜಕರಾದ ವ್ಹಿ.ಎಸ್.ಚಿಗರಿ, ಕ್ರೀಡಾ ವಿಭಾಗದ ನಿರ್ದೇಶಕರಾದ ಎಮ್.ಎಮ್.ದೇವನಾಳ, ವಿದ್ಯಾರ್ಥಿ ಪ್ರತಿನಿಧಿಗಳಾದ ದರ್ಶನ್ ಛಲವಾದಿ, ರಕ್ಷಿತಾ ಹೂಲಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಾಕ್ಸ್ ಸುದ್ದಿ:
ವಿವಿಧ ಕ್ಷೇತ್ರಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ : ಸಾಂಸ್ಕೃತಿಕ ಚಟುವಟಿಕೆಗಳಾದ ಭಾವಗೀತೆ, ಭಕ್ತಿಗೀತೆ, ಏಕಪಾತ್ರಾಭಿನಯ, ಕ್ರೀಡಾ ವಲಯದಲ್ಲಿ ಜಿಲ್ಲೆ, ತಾಲೂಕು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಕಬ್ಬಡ್ಡಿ, ಖೋ ಖೋ, ವಾಲಿಬಾಲ್, ಥ್ರೋಬಾಲ್, ಓಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಶಸ್ತಿ ಪ್ರಧಾನ ಮಾಡಿದರು.