ಒಳಪಂಗಡಗಳ ಜಗಳ ಬಿಟ್ಟು ಲಿಂಗಾಯಿತರೆಲ್ಲ ಒಂದಾಗಲಿ: ಡಾ.ಎಸ್‌.ಎಂ.ಜಾಮದಾರ

Let all Lingayats unite, leaving behind sectarian strife: Dr. S.M. Jamadara

ಲೋಕದರ್ಶನ ವರದಿ 

ಒಳಪಂಗಡಗಳ ಜಗಳ ಬಿಟ್ಟು ಲಿಂಗಾಯಿತರೆಲ್ಲ ಒಂದಾಗಲಿ: ಡಾ.ಎಸ್‌.ಎಂ.ಜಾಮದಾರ 


ಬೆಳಗಾವಿ;  ಒಳಪಂಗಡಗಳ  ಜಗಳ ಬಿಟ್ಟು ಲಿಂಗಾಯಿತರೆಲ್ಲ ಒಂದಾಗಬೇಕು ಮತ್ತು ಲಿಂಗಾಯಿತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಹಿಮ್ಮೆಟ್ಟಿಸಬೇಕು ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್‌.ಎಂ.ಜಾಮದಾರ  ಹೇಳಿದರು. 

ಅವರಿಂದು ಜಾಗತಿಕ ಲಿಂಗಾಯಿತ ಮಹಾಸಭಾ, ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯಿತ ಸಂಘಟನೆ ಮತ್ತು  ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಏರಿ​‍್ಡಸಲಾಗಿದ್ದ "ವಚನದರ್ಶನ ಮಿಥ್ಯ ಗಿಖ ಸತ್ಯ" ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. 

ಲಿಂಗಾಯಿತರನ್ನು ವೈದಿಕ ಶೈವರೆಂದು ಬಿಂಬಿಸುವ ಪ್ರಯತ್ನ ನಡೆದಿದೆ, ಲಿಂಗಾಯತ ತತ್ವಗಳಿಗೆ ವಿರೋಧವಾದ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆ, ಬಸವಾದಿ ಶರಣರ ಮತ್ತು ವಚನ ಸಾಹಿತ್ಯದ ಕುರಿತು ನಡೆಯುತ್ತಿರುವ ಅಪಪ್ರಚಾರ ನಿಲ್ಲಬೇಕು. ಉಪಜಾತಿ, ಒಳಪಂಗಡಗಳ ರಾಜಕಾರಣದಿಂದಾಗಿ ಲಿಂಗಾಯಿತರೆಲ್ಲ ದಿಕ್ಕಾ ಪಾಲಾಗಿದ್ದಾರೆ ಅವರನ್ನೆಲ್ಲ ಒಗ್ಗೂಡಿಸುವ ಕಾರ್ಯ ನಡೆಯಬೇಕಿದೆ. ಎಲ್ಲ ಮಠಗಳಲ್ಲಿ ಹರಿದು ಹಂಚಿ ಹೋಗಿರುವ ಲಿಂಗಾಯಿತರನ್ನೆಲ್ಲಾ ಒಗ್ಗೂಡಿಸಬೇಕಿದೆ ಎಂದವರು ಕರೆ ನೀಡಿದರು.  

ರಾಜಕಾರಣಿಗಳ ಬೆನ್ನು ಹತ್ತಿ  ಹಾಳಾಗಿದ್ದೆ ಹೆಚ್ಚು ಅವರಿಂದ ಲಿಂಗಾಯತ ಸಮಾಜಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. ರಾಜ್ಯದಲ್ಲಿ ಲಿಂಗಾಯಿತರ ಸಂಖ್ಯೆ 1.35 ಕೋಟಿ ಅದರ ಬದಲಾಗಿ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ, ಮಹಾರಾಷ್ಟ್ರದಲ್ಲಿ  1.25 ಕೋಟಿ ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಕೋಟ್ಯಾಂತರ ಲಿಂಗಾಯಿತರು ಇದ್ದಾರೆ. ಮತ ಗಳಿಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಲಿಂಗಾಯಿತ ಸಮಾಜ ಛಿದ್ರ ಛಿದ್ರಗೊಂಡಿದೆ, ವಚನಗಳನ್ನು ಭಾರತದ ಪರಂಪರೆಗೆ ವಿರುದ್ಧವೆಂದು ಬಿಂಬಿಸುವ ಪ್ರಯತ್ನ ನಡೆಯಿತು. ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ಲಿಂಗಾಯಿತರಿಗೆ ಬೇರೆಯವರು ರಾಷ್ಟ್ರೀಯತೆಯನ್ನು ಕಲಿಸುವ ಅಗತ್ಯ ಇಲ್ಲ. ಲಿಂಗಾಯಿತ ಮಠಗಳು ಮತ್ತು ಲಿಂಗಾಯಿತ ಸಂಸ್ಥೆಗಳು ಮಾಡಿದ ಶಿಕ್ಷಣ ದಾಸೋಹದಿಂದಾಗಿ ಇಂದು ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸುಶಿಕ್ಷಿತರು ಯಾರಾದರೂ ಇದ್ದರೆ ಅದು ಲಿಂಗಾಯಿತರು ಮಾತ್ರ ಎಂದವರು ಹೇಳಿದರು. 

ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು, ಲಿಂಗಾಯಿತರು ಈ ನಾಡಿಗೆ ನೀಡಿದ ಕೊಡುಗೆಯನ್ನು ಅರ್ಥಮಾಡಿಕೊಳ್ಳಬೇಕು, ಅನುಭವ ಮಂಟಪವೇ ಇರಲಿಲ್ಲ ಎಂದವರಿಗೆ ಬಹಳ ಹಿಂದೆಯೇ ಉತ್ತರ ಕೊಟ್ಟು ಆಗಿದೆ ಲಿಂಗಾಯಿತರ ವಿರುದ್ಧ, ಲಿಂಗಾಯಿತ ಧರ್ಮದ ವಿರುದ್ಧ , ವಚನ ಸಾಹಿತ್ಯದ ವಿರುದ್ಧ ಬಸವಣ್ಣನವರ ವಿರುದ್ಧ  ಮಾಡಲಾಗುತ್ತಿರುವ ಸುಳ್ಳುಗಳ ಪ್ರಚಾರ ನಿಲ್ಲಬೇಕು ಎಂದವರು ಎಚ್ಚರಿಕೆ ನೀಡಿದರು. 

ಮುಖ್ಯ ಅತಿಥಿಗಳಾಗಿದ್ದ ವಚನ ಟಿವಿ ಪ್ರಧಾನ ಸಂಪಾದಕ ಪ್ರೊ.ಸಿದ್ದು ಯಾಪಲಪರವಿ ಮಾತನಾಡಿ ಕೆಲವರು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸಿ ಜಾಗತಿಕ ಲಿಂಗಾಯತ ಮಹಾಸಭೆಯ ಬೆಳವಣಿಗೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಬದಲಾದ ವಾತಾವರಣಕ್ಕೆ ತಕ್ಕಂತೆ ನಾವು ಕೂಡ ಸಾಮಾಜಿಕ ಜಾಲತಾಣದ ಮೂಲಕ , ಡಿಜಿಟಲ್ ಮಾಧ್ಯಮದ ಮೂಲಕ ಸತ್ಯವನ್ನು ತಿಳಿಸುವ ಕಾರ್ಯ ಮಾಡಬೇಕು,  ವಿಚರಸಂಕಿರಣಗಳು,  ಚರ್ಚೆಗಳು ನಡೆಯುವಂತಾಗಬೇಕು ಅಧಿಕಾರಕ್ಕೆ ಬೆನ್ನು ಹತ್ತದೆ ಈ ಕಾರ್ಯ ಕೈಗೊಳ್ಳುವಂತಾಗಬೇಕು. ಇಷ್ಟ ಲಿಂಗದ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಸಬೇಕು. ಲಿಂಗವನ್ನು ಧರಿಸಿಕೊಳ್ಳಲು ಅದಕ್ಕಿರುವ ನಿಯಮಗಳನ್ನು ಸಡಿಲಿಸಿ ಸರಳೀಕರಣ ಗೊಳಿಸುವಂತಹ ಕಾರ್ಯಕ್ರಮ ಆಗಬೇಕು  ಎಂದು ನುಡಿದರು. 

ಸಾನಿಧ್ಯ ವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಜಗದ್ಗುರು.ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು  "ವಚನದರ್ಶನ ನಿತ್ಯ ಗಿಖ ಸತ್ಯ" ಗ್ರಂಥ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ವಚನದರ್ಶನ ಗ್ರಂಥದಲ್ಲಿ ಬಸವಾದಿ ಶಿವಶರಣರ ಆಶಯಕ್ಕೆ  ವಿರುದ್ಧವಾದ ವಿಚಾರವನ್ನು ಮುದ್ರಿಸಿ, ಪ್ರಚಾರ ಮಾಡಲಾಗಿದೆ, ಜಾತಿ ವ್ಯವಸ್ಥೆಯನ್ನು ಮುಂದುವರಿಸುವ ಪ್ರಯತ್ನ ಮಾಡಲಾಗಿದೆ, ಪುನ: ಪುರೋಹಿತಶಾಹಿ ವ್ಯವಸ್ಥೆಯನ್ನ ಜಾರಿಗೆ ತರುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ವೈದಿಕ ವಿಚಾರಧಾರೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಿದ ವಿಚಾರಧಾರೆಯೇ ಇಲ್ಲಿಯೂ ಕಾರ್ಯನಿರ್ವಹಿಸುತ್ತಿದೆ, ತನ್ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಅದಕ್ಕೆ ನಾವು   ವಚನ ದರ್ಶನದಲ್ಲಿ ಇರುವ ದೋಷಗಳನ್ನು ಜನಕ್ಕೆ ತಿಳಿಸುವ ಕಾರ್ಯ ಮಾಡಬೇಕಿದೆ ಅದರ ಅಂಗವಾಗಿಯೇ ಇಂದು ವಚನದರ್ಶನ ಮಿಥ್ಯ ಸತ್ಯ ಗ್ರಂಥವನ್ನು ಲೋಕಾರೆ​‍್ಣ ಗೊಳಿಸಲಾಗಿದೆ ಅದರ ಮೂಲಕ ಸತ್ಯವನ್ನು ಸಾಮಾನ್ಯ ಜನತೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು. 

 ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ವಚನದರ್ಶನ ಗ್ರಂಥವೇ ಮಿಥ್ಯ, ಬಸವಣ್ಣನವರ ಲಿಂಗಾಯಿತ ಧರ್ಮವೇ ಸತ್ಯ ಈ ಕುರಿತು ಜನರಿಗೆ ತಿಳಿಸುವ ಕಾರ್ಯವಾಗಬೇಕು, ನಾವು ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಕಷ್ಟ ತಪ್ಪಿದ್ದಲ್ಲ, ಶರಣ ಪರಂಪರೆಯ ಮಠದ ವಾರಸುದಾರರು ವಿಭೂತಿ ಬಿಟ್ಟು ಹಣೆಗೆ ಕುಂಕುಮ ಹಚ್ಚಿಕೊಂಡು ಓಡಾಡುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ ಎಂದ ಅವರು ಗುರು ವಿರಕ್ತರು ಒಂದಾಗಬೇಕು ಎಂದರೆ ಅದು ಹೇಗೆ ಸಾಧ್ಯ? ಅವರು ಏನು ಹೇಳುತ್ತಾರೋ ಹೇಳಲಿ ನಮ್ಮ ವಿಚಾರವನ್ನು ನಾವು ಸ್ಪಷ್ಟಪಡಿಸುವುದು ಮುಖ್ಯ ಎಂದು ನುಡಿದ ಅವರು ಇತ್ತೀಚಿಗೆ ಶಂಕರ್ ಬಿದರಿ ಅವರು ನೀಡಲಾದ ಹೇಳಿಕೆ ಉಲ್ಲೇಖಿಸಿ ನೀವು ವೀರಶೈವರೋ- ಲಿಂಗಾಯಿತರೋ ಸ್ಪಷ್ಟವಾಗಿ ಹೇಳಿ ವೀರಶೈವರಾದರೆ ಅಲ್ಲಿಯೇ ಇರಿ ಲಿಂಗಾಯಿತರಾದರೆ ಇಲ್ಲಿಗೆ ಬನ್ನಿ ಎರಡನ್ನು ಏಕ ಕಾಲಕ್ಕೆ ಹೇಳಬೇಡಿ ಎಂದವರು ಸಲಹೆ ನೀಡಿದರು.  

 ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಷಟಸ್ಥಲ ಧ್ವಜಾರೋಹಣ  ನೆರವೇರಿಸಿದರು. 

ಲಿಂಗಾಯಿತ ಮಹಾಸಭೆಯ ಜಿಲ್ಲಾ ಅಧ್ಯಕ್ಷ  ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಪ್ರೊ. ಕೆ.ಎಸ್‌. ಕೌಜಲಗಿ ಅವರು ಗ್ರಂಥ ಪರಿಚಯ ಮಾಡಿಕೊಟ್ಟರು. ರಾಷ್ಟ್ರೀಯ ಬಸವದಳ ಬೆಳಗಾವಿ ಅಧ್ಯಕ್ಷ ಅಶೋಕ್ ಬೆಂಡಿಗೇರಿ, ಬೆಳಗಾವಿ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇವಣ್ಣವರ, ಲಿಂಗಾಯತ ಮಹಾಸಭೆಯ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ ಗುಡಿಸಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಲಿಂಗಾಯತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಸ್ವಾಗತಿಸಿದರು. ಪ್ರೊ.ಮಂಜುನಾಥ ಶರಣಪ್ಪನವರ ನಿರ್ವಹಿಸಿದರು. ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಅಂಗಡಿ ವಂದಿಸಿದರು. ನೈನಾ ಗಿರಿಗೌಡರ ಮತ್ತು ಸಂಗಡಿಗರಿಂದ ವಚನ ಪ್ರಾರ್ಥನೆ ನಡೆಯಿತು.