ಸಾವಿತ್ರಿಬಾಯಿ ಫುಲೆ ವಿಚಾರಧಾರೆ ಜೀವನಕ್ಕೆ ಸ್ಫೂರ್ತಿದಾಯಕ ಆದರ್ಶವಾಗಲಿ: ಮಧುಲತಾ ಗೌಡರ್

Let Savitribai Phule ideology be an inspiring role model for life: Madhulata Gowder

ಸಾವಿತ್ರಿಬಾಯಿ ಫುಲೆ ವಿಚಾರಧಾರೆ ಜೀವನಕ್ಕೆ ಸ್ಫೂರ್ತಿದಾಯಕ ಆದರ್ಶವಾಗಲಿ: ಮಧುಲತಾ ಗೌಡರ್ 

ಧಾರವಾಡ 03: ಹಿಸುಮಾರು 200 ವರ್ಷಗಳ ಹಿಂದೆ ಮಹಿಳೆಯನ್ನು ಮನುಷ್ಯಳೆಂದೇ ಪರಿಗಣಿಸದ ಸಮಾಜದಲ್ಲಿ, ಒಬ್ಬ ಮಹಿಳೆಯಾಗಿ ಓದು ಬರಹ ಕಲಿತು, ಅದನ್ನೇ ಜ್ವಾಲೆಯಾಗಿ ಹಿಡಿದುಕೊಂಡು ಮುನ್ನಡೆದ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ.  ಸಮಾನತೆಯ ಕಲ್ಪನೆ ಇನ್ನೂ ಸಮಾಜದಲ್ಲಿ ಸ್ಪಷ್ಟವಾಗಿ ಬೇರೂರುವ ಮೊದಲೇ ಶಿಕ್ಷಣದ ಮಹತ್ವ ಅರಿತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿಟ್ಟ ವ್ಯಕ್ತಿತ್ವ ಅವರದು. ಜಾತಿ-ಲಿಂಗ ತಾರತಮ್ಯ, ಅಸ್ಪೃಶ್ಯತೆ, ಬಾಲ್ಯ ವಿವಾಹ, ವಿಧವಾ ದೌರ್ಜನ್ಯ, ಮಹಿಳಾ ಅನಕ್ಷರತೆಯಂತಹ ಹಲವು ಅಮಾನವೀಯ ಧೋರಣೆಗಳ ವಿರುದ್ಧ ಸಮರ ಸಾರಿ, ಲಿಂಗ ಸಮಾನತೆ, ದೀನ ದಲಿತರೂ ಕೂಡ ಮನುಷ್ಯರೇ ಎಂದು ಸಾವಿತ್ರಿಬಾಯಿ ಫುಲೆ ಪ್ರತಿಪಾದಿಸಿದರು ಎಂದು ಎ.ಐ.ಎಮ್‌.ಎಸ್‌.ಎಸ್‌ನ ಜಿಲ್ಲಾಧ್ಯಕ್ಷ ಮಧುಲತಾ ಗೌಡರ್ ಹೇಳಿದರು. 

ಎ.ಐ.ಎಮ್‌.ಎಸ್‌.ಎಸ್ ನ ರಾಜ್ಯ ಸಮಿತಿ ಕರೆಯ ಮೇರೆಗೆ ‘ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿ ಬಾಯಿ ಫುಲೆರವರ ಜನ್ಮ ದಿನದ ಅಂಗವಾಗಿ ಧಾರವಾಡ ಜಿಲ್ಲೆಯಾದ್ಯಂತ ಜನವರಿ 3ರಿಂದ 18 ರವರೆಗೆ ‘ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಇಂದು ಜೋಡಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

        ಇಂದು ನಾವು ಸಾವಿತ್ರಿಬಾಯಿ ಫುಲೆಯ ವರನ್ನು ನೆನೆಯುವಾಗ ನಮ್ಮ ಇಂದಿನ ಸಂದರ್ಭಕ್ಕೆ ಅವರ ವಿಚಾರಗಳ ಅವಶ್ಯಕತೆ ಹಾಗೂ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಬೇಕು. ಅವರು ಅಂದು  ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು. ಪರಿಣಾಮವಾಗಿ ಸಾಕಷ್ಟು ಜನ ವಿದ್ಯಾವಂತರಾಗಿದ್ದಾರೆ. ಆದರೆ ಇಂದಿಗೂ ಹೆಣ್ಣನ್ನು ನೋಡುವ ಮನೋಭಾವದಲ್ಲಿ ಮೂಲಭೂತ ವ್ಯತ್ಯಾಸವನ್ನು ಕಾಣುವುದಿಲ್ಲ. ಮಹಿಳೆಯ ಮೇಲಿನ ದಬ್ಬಾಳಿಕೆ, ದೌರ್ಜನ್ಯ ಹೊಸ ರೂಪ ಪಡೆದುಕೊಂಡಿವೆ. ಒಂದೆಡೆ ಪುರುಷ ಪ್ರಧಾನ ಅಧೀನತೆ,ಇನ್ನೊಂದೆಡೆ ಬಂಡವಾಳಶಾಹಿ ಆರ್ಥಿಕ ಶೋಷಣೆ. ಇದರ ಕುರಿತು ಹೆಣ್ಣು ಮಕ್ಕಳಲ್ಲಿ, ಜನಸಾಮಾನ್ಯರಲ್ಲಿ ಪ್ರಜ್ಞೆ ಮೂಡಿಸಿ, ಅವರನ್ನು ಒಗ್ಗೂಡಿಸಿದಾಗ ಜನಚಳುವಳಿಗಳನ್ನು ಬೆಳೆಸಿದಾಗ ಮಾತ್ರ ಸಾವಿತ್ರಿ ಬಾಯಿ ಫುಲೆರವರಿಗೆ ಗೌರವ ಸಲ್ಲಿಸಿದಂತೆ. ಹೀಗೆ ಮಹಾನ್ ವ್ಯಕ್ತಿಗಳ ದಿನಗಳ ಆಚರಣೆ ಕೇವಲ ಸಂಪ್ರದಾಯವಾಗದೇ, ಬದಲಾಗಿ ಅವರ ವಿಚಾರಧಾರೆ ನಮ್ಮ ಜೀವನಕ್ಕೆ ಸ್ಫೂರ್ತಿದಾಯಕ ಆದರ್ಶವಾಗಬೇಕು ಎಂದು ಕರೆ ನೀಡಿದರು. 

ಎ.ಐ.ಎಮ್‌.ಎಸ್‌.ಎಸ್ ಧಾರವಾಡ ಜಿಲ್ಲಾ ಉಪಾಧ್ಯಕ್ಷ ದೇವಮ್ಮ ದೇವತ್ಕಲ್, ಸಂಘಟನಾಕಾರ ಅನುಸೂಯ  ಜೋಡಳ್ಳಿ ಗ್ರಾಮ ಘಟಕದ ಸದಸ್ಯರುಗಳಾದ ಮಲ್ಲಮ್ಮ ಶಿರಗುಪ್ಪಿ, ಜ್ಯೋತಿ, ದೀಪಾ, ಸರಸ್ವತಿ, ವಿದ್ಯಾ ಮುಂತಾದವರು ಭಾಗವಹಿಸಿದ್ದರು.