ಗಣತಂತ್ರ ದಿನ ನಮ್ಮ ಆತ್ಮಾವಲೋಕನದ ದಿನವಾಗಲಿ : ಡಾ. ಮೋಹನ್ ಕೃಷ್ಣ ರೈ

Let Republic Day be our self-reflection day: Dr. Mohan Krishna Rai

ಗಣತಂತ್ರ ದಿನ ನಮ್ಮ ಆತ್ಮಾವಲೋಕನದ ದಿನವಾಗಲಿ : ಡಾ. ಮೋಹನ್ ಕೃಷ್ಣ ರೈ 

ಹಂಪಿ 26: ಭಾರತ ಗಣರಾಜ್ಯವಾಗಿ 76 ವರ್ಷಗಳಾದರೂ ದೇಶವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವನ್ನಾಗಿ ರೂಪಿಸಿಕೊಳ್ಳುವಲ್ಲಿ ಪ್ರಜೆಗಳಾದ ನಾವು ಯಶಸ್ಸು ಪಡೆದ್ದೇವ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ, ವಿಮರ್ಶೆಗೆ ಒಳಪಡಿಸಬೇಕಾದ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವೇ ಈ ಗಣರಾಜ್ಯೋತ್ಸವದ ದಿನ ಎಂದು ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಡಾ.ಮೋಹನ್ ಕೃಷ್ಣ ರೈ ಅವರು ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದ ಮುಂಭಾಗದಲ್ಲಿ 76ನೇ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತವು ವೈದಿಕ, ರಾಜ ಪ್ರಭುತ್ವ, ವಸಾಹತುಶಾಹಿ ತರಹದ ಆಡಳಿತದಿಂದ ಪ್ರಜಾಪ್ರಭುತ್ವ ಆಡಳಿತಕ್ಕೆ ಬದಲಾದರೂ ದೇಶದಲ್ಲಿ ನವ ವಸಾಹತುಶಾಹಿ, ಮಾರುಕಟ್ಟೆ ಕೇಂದ್ರಿತ ಆರ್ಥಿಕತೆ, ಮಾಹಿತಿ ಆಧಾರಿತ ಮಾರುಕಟ್ಟೆ ಹೆಚ್ಚಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಕ್ಕಟ್ಟಿನ ಪರಿಸ್ಥಿತಿಗೆ ದೂಡಿವೆ. ಸ್ವತಂತ್ರ ಪೂರ್ವದಲ್ಲಿ ಭಾರತವು ಸುಮಾರು 562 ಸಂಸ್ಥಾನಗಳಲ್ಲಿ ವೈವಿಧ್ಯಮಯ ಪ್ರಾದೇಶಿಕತೆ, ಭಾಷೆ, ಜಾತಿ, ಧರ್ಮಗಳಿಂದ ಕೂಡಿತ್ತು. ಇಂತಹ ವೈವಿಧ್ಯತೆಯನ್ನು ಅಖಂಡ ರಾಷ್ಟವನ್ನಾಗಿರಿಸುವಲ್ಲಿ ಭಾರತಕ್ಕೆ ಬೃಹತ್ ಸಂವಿಧಾನದ ಅವಶ್ಯಕತೆಯಿತ್ತು. ಪ್ರಜಾಪ್ರಭುತ್ವದ ಯಶಸ್ಸು ಮುಕ್ತ ಚುನಾವಣೆ, ಬಲಿಷ್ಠ ವಿರೋದ ಪಕ್ಷ ಮತ್ತು ನೈತಿಕ ರಾಜಕಾರಣವನ್ನು ಒಳಗೊಂಡಿರುವುದಾಗಿ ಡಾ.ಬಿ.ಆರ್ ಅಂಬೇಡ್ಕರ್ ಅವರು ನಂಬಿದ್ದರು. ಆದರೆ ಇಂದು ದೇಶದಲ್ಲಿ ಜಾತೀಯತೆ, ಕೋಮುವಾದ, ಧಾರ್ಮಿಕ ಸಂಘರ್ಷಗಳು ತಾಂಡವಾಡುತ್ತಿವೆ. ದೇಶದಲ್ಲಿ ಏನಾದರೂ ಬದಲಿಸಬಹುದು ಎಂದರೆ ಅದು ಶಿಕ್ಷಣದ ಮೂಲಕವೇ, ಆದ್ದರಿಂದ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆಯನ್ನು ಮೂಡಿಸುವಂತಿರಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಬಿಕ್ಕಟ್ಟನಲ್ಲಿದೆ, ಇದರ ನೆರವಿಗೆ ಉನ್ನತ ಶಿಕ್ಷಣ ಸಂಸ್ಥೆಗಳು ಶ್ರಮ ವಹಿಸಬೇಕು ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ವಿಶ್ವವಿದ್ಯಾಲದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ ಪರಮಶಿವಮೂರ್ತಿ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಜೊತೆಗೆ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಾ.ಮೋಹನ್‌ಕೃಷ್ಣ ರೈ ಅವರಿಗೆ ಹಾಗೂ ಕೆ.ಎಸ್‌.ಆರ್‌.ಟಿ.ಸಿ ನೌಕರರಾದ ಸುರೇಶ್ ಅವರಿಗೆ ಸನ್ಮಾನ ಮಾಡಿದರು. 

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ, ಅಧ್ಯಯನಾಂಗದ ನಿರ್ದೇಶಕರಾದ ಡಾ. ಅಮರೇಶ್ ಯತಗಲ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.