ಹಿರಿಯ ನಾಗರಿಕರನ್ನು ಗೌರವಿಸೋಣ: ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್
ಬಳ್ಳಾರಿ 11: ಹಿರಿಯ ನಾಗರಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು. ಸರ್ಕಾರವು ಹಿರಿಯರ ರಕ್ಷಣೆ ಹಾಗೂ ಅವರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಹಿರಿಯರ ನಾಗರಿಕರಿಗೆ ದೊರಕಿಸಿಕೊಡೋಣ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝಬೇರ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರಿ್ಡಸಿದ್ದ ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ವಯೋಸಹಜ ಅಂಗವಿಕಲತೆಯಿಂದಾಗುವ ಸಮಸ್ಯೆಗಳನ್ನು ನಿವಾರಿಸಲು ಈ ಸಲಕರಣೆಗಳು ಸಹಕಾರಿಯಾಗಲಿವೆ. ಹಿರಿಯರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಯೋಜನೆ ಸಫಲವಾಗಲಿದೆ ಎಂದರು. ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವೈಕಲ್ಯ ಶಾಪವಲ್ಲ. ಅದನ್ನು ಮೆಟ್ಟಿ ನಿಲ್ಲಬೇಕು, ಕುಗ್ಗಬಾರದು ಎಂದು ಹೇಳಿದರು. ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ನೋಂದಣಿಯಾದ ಜಿಲ್ಲೆಯ 582 ಹಿರಿಯ ನಾಗರಿಕರಿಗೆ 1,754 ವಿವಿಧ ರೀತಿಯ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜಲಾಲಪ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ, ಶಿಕ್ಷಣ ಇಲಾಖೆ ಇಸಿಓ ಅಧಿಕಾರಿ ಮಂಜುನಾಥ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ, ಬೆಂಗಳೂರಿನ ಅಲೀಂಕೋ ಸಂಸ್ಥೆಯ ಶಿಲ್ಪಾ, ಸ್ಮೈಲ್ ಸಂಸ್ಥೆಯ ಅಧ್ಯಕ್ಷ ಉಮಾಪತಿ ಗೌಡ ಸೇರಿದಂತೆ ಜಿಲ್ಲಾ ವಿಕಲಚೇತನರ ಪುರ್ನವಸತಿ ಕೇಂದ್ರ, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿರಿಯ ನಾಗಕರಿಕರು, ಮತ್ತೀತರರು ಉಪಸ್ಥಿತರಿದ್ದರು.