ದಿವ್ಯಾಂಗರ ನೆರವಿಗೆ ಕಾನೂನು ಪ್ರಾಧಿಕಾರ ಸದಾ ಸಿದ್ಧ: ನ್ಯಾ.ಕೆ. ಯಮನಪ್ಪ
ಹುಬ್ಬಳ್ಳಿ 13: ದಿವ್ಯಾಂಗರು ಹಾಗೂ ಅಸಹಾಯಕರಿಗೆಸರ್ಕಾರದಿಂದ ಸೌಲಭ್ಯ ಲಭಿಸಬೇಕು. ಆದರೆ, ಕೆಲವೆಡೆ ನ್ಯೂನತೆ ಹಾಗೂ ಅವರ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ಅವರೂ ನಮ್ಮ ಹಾಗೆಯೇ ಎಂಬ ಮಾನವೀಯತೆಯಿಂದ ಸೌಲಭ್ಯ ಕಲ್ಪಿಸಬೇಕು ಈ ನಿಟ್ಟಿನಲ್ಲಿ ದಿವ್ಯಾಂಗರ ನೆರವಿಗೆ ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ ಎಂದು ತಾಲೂಕಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು ಹಾಗೂ ನ್ಯಾಯಾಧೀಶ ಕೆ. ಯಮನಪ್ಪ ಹೇಳಿದರು.ಸಕ್ಷಮ ಉತ್ತರ ಕರ್ನಾಟಕ ಪ್ರಾಂತ, ಮಜೇಥಿಯಾ ಫೌಂಡೇಷನ್, ಕಾನೂನು ಸೇವಾ ಪ್ರಾಧಿಕಾರ, ಎಐಎಂ, ಯುಥ್ ಫಾರ್ ಸೇವಾ ವತಿಯಿಂದ ಇಲ್ಲಿನ ಕೆಎಂಸಿಆರ್‌ಐ ನೃಪತುಂಗ ಸಭಾ ಭವನದಲ್ಲಿ ಭಾನುವಾರ ಏರಿ್ಡಸಿದ್ದ ವಿಶ್ವ ದಿವ್ಯಾಂಗರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಕಾನೂನು ಎಷ್ಟೇ ಕಠಿಣವಿದ್ದರೂ, ಮನುಷ್ಯನಾದವನಿಗೆ ಸಹಾನುಭೂತಿ ಅಗತ್ಯ. ನಿರ್ಗತಿಕರು, ದಿವ್ಯಾಂಗರು ಹಾಗೂ ಅಸಹಾಯಕರು ಸರ್ಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾದರೆ ನೇರವಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಇದರಿಂದ ಕಾನೂನಿನ ನೆರವು ಖಂಡಿತ ಸಿಗಲಿದೆ ನಾವೆಲ್ಲ ದಿವ್ಯಾಂಗರೊಂದಿಗೆ ಹೃದಯದಿಂದ ವ್ಯವಹರಿಸಿ ಮಾತನಾಡಬೇಕು ಎಂದರು.ನ್ಯಾಯಾಧೀಶ ಆರ್. ರಾಘವೇಂದ್ರ ಮಾತನಾಡಿ, ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಅಸಹಾಯಕರ ನಡುವೆ ಬದುಕುವ ಅರ್ಹತೆ ನಮಗಿದೆಯೇ? ಎಂದು ಪ್ರಶ್ನಿಸಿಕೊಳ್ಳಬೇಕು. ಇಲ್ಲದಿದ್ದರೆ ಇಂತಹ ದಿನಾಚರಣೆಗೆ ಅರ್ಥವಿಲ್ಲ. ದಿವ್ಯಾಂಗರಲ್ಲಿಯೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಪ್ರತಿಭೆಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಪ್ರೋತ್ಸಾಹಿಸಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಿವ್ಯಾಂಗರನ್ನು ಸನ್ಮಾನಿಸಲಾಯಿತು. ಸಕ್ಷಮ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಡಾ. ಸುನೀಲ ಗೋಖಲೆ ಅಧ್ಯಕ್ಷತೆ ವಹಿಸಿದ್ದರು. ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಐಎಂಎ ಅಧ್ಯಕ್ಷ ಪ್ರಭು ಬಿರಾದಾರ, ಸಿಎಒ ರಮೇಶ ಕಳಸದ, ಪ್ರೊ. ಸಂದೀಪ ಬೂದಿಹಾಳ, ಡಾ. ಕೆ.ಎಫ್. ಕಮ್ಮಾರ, ವಕೀಲೆ ಸವಿತಾ ಪಾಟೀಲ, ಡಾ. ವಿ.ಬಿ. ನಿಟಾಲಿ, ಡಾ. ಬಸವರಾಜ ತಲವಾಯಿ ಉಪಸ್ಥಿತರಿದ್ದರು. ಸರ್ವರನ್ನೂ ಡಾ. ನಾಗಲಿಂಗ ಮುರಗಿ ಸ್ವಾಗತಿಸಿದರು, ಮೀನಾ ಡಾ. ಗೋಪಾಲಕೃಷ್ಣ ಮಿತ್ರ ವಂದಿಸಿದರು.